ಎರಡು ಬಾರಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಸಿದ್ಧರಾಮಯ್ಯ ನಾಲ್ಕು ತಿಂಗಳ ಹಿಂದೆ ರಾಜಿನಾಮೆ ನೀಡಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಅವರು ಜಾರಿಗೆ ತಂದಿದ್ದರು. ಇದೀಗ ಸಿದ್ದು ಮತ್ತೆ ಮುಖ್ಯಮಂತ್ರಿ ಆಗ್ತಿದ್ದಾರೆ. ಆದರೆ ನಿಜ ಜೀವನದಲ್ಲಿ ಅಲ್ಲ, ಬದಲಿಗೆ ಸಿನಿಮಾದಲ್ಲಿ.
ನವ ನಿರ್ದೇಶಕ ರಾಜೇಶ್ ನಿರ್ದೇಶನದ ಚಿತ್ರದಲ್ಲಿ ಸಿದ್ದರಾಮಯ್ಯ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ 'ಮುಖ್ಯಮಂತ್ರಿ' ಎಂದು ಹೆಸರಿಡುವ ಸಾಧ್ಯತೆಯಿದೆ. RA ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ ಸಿನಿಮಾ ಕಥೆ ಕೇಳಿ ನಟಿಸುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಕೊಂಚ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಿದ್ದರಾಮಯ್ಯ 5 ವರ್ಷಗಳ ಕಾಲ ಅಧಿಕಾರ ಪೂರೈಸಿದ್ದರ. 2023ರಲ್ಲಿ ಎರಡನೇ ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಪಟ್ಟ ಅಲಂಕರಿಸಿದ್ದರು. ಮೂರು ವರ್ಷಗಳ ಬಳಿಕ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟರು.
1980ರ ದಶಕದಲ್ಲಿ ಸಿದ್ದರಾಮಯ್ಯ ರೈತ ಚಳವಳಿಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದರು. ಬಳಿಕ ನಿಧಾನವಾಗಿ ರಾಜಕೀಯರಂಗದಲ್ಲಿ ಸಕ್ರಿಯರಾಗಿದ್ದರು. 1983ರಲ್ಲಿಅವರು ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಬಳಿಕ ಜನತಾದಳ ಸೇರಿದ್ದರು.