ಪವನ್ ಒಡೆಯರ್ ನಿರ್ದೇಶನದ ಶಿವರಾಜ್‌ಕುಮಾರ್ ನಟನೆಯ 'ಬೇಲ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ಆಕ್ಷನ್, ಕಾಮಿಡಿ, ಎಮೋಷನ್, ಇನ್ವೆಸ್ಟಿಗೇಷನ್ ಹೀಗೆ ನಾನಾ ವಿಚಾರಗಳನ್ನು ಸೇರಿಸಿ ಕಥೆ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ.

ಸಾಯಿಕುಮಾರ್, ಜಯರಾಮ್, ಸಂಗೀತಾ, ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಲೂಸ್ ಮಾದ ಯೋಗಿ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ದುಷ್ಟ ಶಕ್ತಿಗಳ ವಿರುದ್ಧ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯ ಹೋರಾಟದ ಕಥೆ ಚಿತ್ರದಲ್ಲಿದೆ.

ಒಂದು ದಾಳಿಯಲ್ಲಿ 160 ಜನರ ಮಾರಣಹೋಮ, ನೂರು ಜನ ಗಾಯಗೊಳ್ಳುತ್ತಾರೆ. ಭಯಬಿದ್ದ ಬೆಂಗಳೂರು.. ಪೊಲೀಸರ ತನಿಖೆ ಶುರುವಾಗುತ್ತದೆ. ಬಳಿಕ ಏನೆಲ್ಲಾ ಆಗುತ್ತದೆ ಎನ್ನುವುದು ಸಿನಿಮಾ ಕಥೆ ಎನ್ನುವುದು ಟ್ರೈಲರ್ ನೋಡಿದ್ರೆ ಅರ್ಥವಾಗ್ತಿದೆ. ಯೋಗಿ ರೆಡ್ಡಿಯಾಗಿ ಲೂಸ್ ಮಾದ ಅಬ್ಬರಿಸಿದ್ದಾರೆ. ಈ ಕಳ್ಳ- ಪೊಲೀಸ್ ಚದುರಂಗದಾಟದಲ್ಲಿ ಯಾರೆಲ್ಲಾ ಬರ್ತಾರೆ ? ಹೋಗ್ತಾರೆ ? ಏನೆಲ್ಲಾ ಆಗುತ್ತೆ ಎನ್ನುವುದನ್ನು ತೆರೆಮೇಲೆ ನೋಡಬೇಕು.

ಶಿವಣ್ಣನ ಪತ್ನಿ ಪಾತ್ರದಲ್ಲಿ ಸಂಗೀತಾ, ಮಗಳಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಸ್ನೇಹಿತರಾಗಿ ಸಾಯಿಕುಮಾರ್ ಹಾಗೂ ಜಯರಾಂ ಸಾಥ್ ಕೊಟ್ಟಿದ್ದಾರೆ. ಮೊದಲ ನೋಟದಲ್ಲೇ 'ಬೇಲ್' ಸಿನಿಮಾ ಟ್ರೈಲರ್ ಕುತೂಹಲ ಮೂಡಿಸುವಂತಿದೆ. ಪೊಲೀಸ್, ಕಾನೂನು, ಮಾಧ್ಯಮ, ರಾಜಕೀಯದ ವಿಚಾರಗಳು ಒಟ್ಟಿಗೆ ಸೇರಿಸಿ ಪವನ್ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ತರುತ್ತಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'ಬೇಲ್' ಸಿನಿಮಾ ನಿರ್ಮಾಣ ಮಾಡಿದ್ದು ಅಜನೀಶ್ ಲೋಕನಾಥ್ ಸಂಗೀತ ಚಿತ್ರದಲ್ಲಿದೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಹೊಸ ಶಿವಣ್ಣನನ್ನು ಇಲ್ಲಿ ನೋಡಬಹುದು. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಇನ್ನೆರಡು ಹಾಡುಗಳು ಶೀಘ್ರದಲ್ಲೇ ಹೊರ ಬರಲಿದೆ.