ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಬೇಲ್' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ಚಿತ್ರತಂಡ ಭರ್ಜರಿ ಪ್ರಚಾರ ನಡೆಸ್ತಿದೆ. ಶಿವಣ್ಣ ಜೊತೆಗೆ ಸಾಯಿಕುಮಾರ್, ಜಯರಾಂ, ಲೂಸ್‌ ಮಾದ ಯೋಗಿ, ಸಂಜನಾ ಆನಂದ್ ಚಿತ್ರದಲ್ಲಿ ನಟಿಸಿದ್ದಾರೆ. ಪವನ್ ಒಡೆಯರ್ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಸಾರಥ್ಯ ವಹಿಸಿದ್ದಾರೆ. ನಿವೃತ್ತ ಪೊಲೀಸ್ ಆಫೀಸರ್ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಶಿವಣ್ಣ ವಯಸ್ಸಾದ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದು ಕಮ್ಮಿ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅಂತಹ ಪ್ರಯತ್ನ ಮಾಡಿರಲಿಲ್ಲ. ವಯಸ್ಸಾಯ್ತು ನಿಜ ತಾನೆ. ಅದನ್ನು ಒಪ್ಪಿಕೊಳ್ಳಬೇಕು. ಅಷ್ಟು ವಯಸ್ಸಾಗಿದ್ದರೂ ಇನ್ನು ಯಂಗ್ ಆಗಿ ಕಾಣಿಸಿಕೊಳ್ತೀನಿ ಅನ್ನೋದು ವಿಶೇಷ. ಪಾತ್ರಕ್ಕೆ ಇಂತಹ ಲುಕ್ ಬೇಕು, ಮೀಸೆ, ಕೂದಲಿಗೆ ಬಿಳಿ ಬಣ್ಣ ಹಾಕೋಣ ಅಂದಾಗ ಒಪ್ಪಿಕೊಂಡೆ. ನನಗೆ ಜೋಗಯ್ಯ', 'ಸತ್ಯ ಇನ್ ಲವ್' ವಿಗ್ ನನಗೆ ಇಷ್ಟ ಆಗಿರಲಿಲ್ಲ, ಆದ್ರೆ ಇದು ಬಹಳ ಇಷ್ಟ ಆಯ್ತು ಎಂದಿದ್ದಾರೆ.

ಮೀಸೆ ಅಂದಾಗ ನನಗೆ ಕೊಂಚ ಅಳುಕ್ಕಿತ್ತು. ಎರಡ್ಮೂರು ಸಿನಿಮಾಗಳಲ್ಲಿ ಆ ರೀತಿ ಆಗಿದೆ. 'ಜೋಗಯ್ಯ' ಚಿತ್ರದ ವಿಗ್ ಇಷ್ಟ ಆಗ್ಲಿಲ್ಲ. ವಿಚಿತ್ರ ಅನ್ನಿಸ್ತು.. ಆದ್ರೆ ಏನು ಮಾಡೋದು ಒಪ್ಕೊಂಡೆ.. ಬಳಿಕ 'ಸತ್ಯ ಇನ್ ಲವ್' ಚಿತ್ರದಲ್ಲೂ ಹಂಗೆ ಆಯ್ತು.. ನಾವು ಸೋತ್ವಿ.. ಕೆಲವೊಮ್ಮೆ ಏನು ಮಾಡೋಕೆ ಆಗಲ್ಲ. ಆದ್ರು ಸಿನಿಮಾ ಚೆನ್ನಾಗಿ ಹೋಯ್ತು.. ನಾನು ಆವರೇಜ್ ಸ್ಟೂಡೆಂಟ್, ರ್ಯಾಂಕ್ ಸ್ಟೂಡೆಂಟ್ ಅಲ್ಲ ಎಂದು ಶಿವರಾಜ್‌ಕುಮಾರ್ ತಿಳಿಸಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್ ನಟಿಸ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಅವ್ರು ನಟಿಸಿರೋ ಮೂರು ಸಿನಿಮಾ ತೆರೆಗೆ ಬರ್ತಿದೆ. 'ಬೇಲ್' ಬೆನ್ನಲ್ಲೇ 'ಜೈಲರ್- 2' ಸಿನಿಮಾ ತೆರೆಗೆ ಬರಲಿದೆ. ಮತ್ತೊಮ್ಮೆ ರಜನಿಕಾಂತ್ ಜೊತೆ ನರಸಿಂಹ ಆಗಿ ಶಿವಣ್ಣ ಅಬ್ಬರಿಸಿದ್ದಾರೆ. ಅಕ್ಟೋಬರ್ 15ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಶ್ರೀನಿ ನಿರ್ದೇಶನದ 'ಬೀರ್‌ಬಲ್-2' ಚಿತ್ರದಲ್ಲೂ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಅದು ತೆರೆಗೆ ಬರಲಿದೆ. 'ಡ್ಯಾಡ್', 666 ಆಪರೇಷನ್ ಡ್ರೀಮ್ ಥಿಯೇಟರ್', ತಮಿಳಿನ 'ಫಿಕಾಸೊ' ಹೀಗೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.