ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಅಗಲಿಕೆ ಚಿತ್ರರಂಗಕ್ಕೆ ಆಘಾತ ತಂದಿದೆ. ತೆರೆಮೇಲೆ ಹಲವು ಪ್ರಯೋಗಗಳನ್ನು ಮಾಡಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ದೃಶ್ಯ ಮಾಂತ್ರಿಕನಿಗೆ ಆಪ್ತರು, ಅಭಿಮಾನಿಗಳು ನುಡಿನಮನ ಸಲ್ಲಿಸುತ್ತಿದ್ದಾರೆ. ದೊಡ್ಮನೆ ಜೊತೆಗೆ ಸಿಂಗೀತಂ ಶ್ರೀನಿವಾಸ್ ಒಡನಾಡ ಬಿಡಿಸಿ ಹೇಳುವುದು ಬೇಕಿತ್ತು. ತಮಗೆ 'ಆನಂದ್' ರೀತಿಯ ಅದ್ಭುತ ಸಿನಿಮಾ ಕೊಟ್ಟ ನಿರ್ದೇಶಕನ ಅಗಲಿಕೆ ಶಿವಣ್ಣ ಕಂಬನಿ ಮಿಡಿದಿದ್ದಾರೆ.

ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಿರ್ದೇಶಕ ನಿನ್ನೆ(ಅಕ್ಟೋಬರ್ 3) ನಿಧನರಾಗಿದ್ದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ನಟನೆಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಶಿವಣ್ಣ ಹಾಗೂ ರಾಘಣ್ಣನ ಸಿನಿಆರಂಗ್ರೇಟಂಗೆ ಅಣ್ಣಾವ್ರು, ಪಾರ್ವತಮ್ಮ ನಂಬಿದ್ದು ಸಿಂಗೀತಂ ಶ್ರೀನಿವಾಸ್ ಅವರನ್ನು ಎನ್ನುವುದು ವಿಶೇಷ. ಅಷ್ಟರಮಟ್ಟಿಗೆ ತಮ್ಮ ನಿರ್ದೇಶನದ ಮೂಲಕ ಅವರು ವಿಶ್ವಾಸ ಗಳಿಸಿದ್ದರು.

ಶಿವರಾಜ್‌ಕುಮಾರ್ ಟ್ವೀಟ್ ಮಾಡಿ "ಸಿಂಗೀತಂ ಶ್ರೀನಿವಾಸ ರಾವ್ ಸರ್, 'ಆನಂದ್' ಚಿತ್ರದ ಮೂಲಕ ನನ್ನ 40 ವರ್ಷಗಳ ಚಲನಚಿತ್ರ ಪಯಣಕ್ಕೆ ನೀವೇ ನಾಂದಿ ಹಾಡಿದ್ದಿರಿ. 94ನೇ ವಯಸ್ಸಿನಲ್ಲಿಯೂ ಸಿನಿಮಾ ನಿರ್ದೇಶಿಸುವ ಮೂಲಕ ನೀವು ಇಡೀ ಜಗತ್ತಿಗೇ ಸ್ಫೂರ್ತಿಯಾದಿರಿ. 'ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ' ಎಂಬುದಕ್ಕೆ ನೀವೇ ಅತ್ಯುತ್ತಮ ಉದಾಹರಣೆ. ನೀವು ಕೇವಲ ಒಂದು ಕಲಾ ಪ್ರಕಾರದ ಭಾಗವಲ್ಲ, ನೀವೇ ಒಂದು 'ಕಲೆ'" ಎಂದು ಬರೆದುಕೊಂಡಿದ್ದಾರೆ.

ಕ್ಯಾನ್ಸರ್ ವಿರುದ್ಧ ಶಿವಣ್ಣ ಹೋರಾಡಿ ಗೆದ್ದಿದ್ದು ಗೊತ್ತೇಯಿದೆ. ಇದನ್ನು 'ಸರ್ವೈವರ್' ಡಾಕ್ಯುಮೆಂಟರಿ ಮೂಲಕ ಜನರ ಮುಂದೆ ತರ್ತಿದ್ದಾರೆ. ಈ ಡಾಕ್ಯುಮೆಂಟರಿ ಬಗ್ಗೆ ಸಿಂಗೀತಂ ಶ್ರೀನಿವಾಸ್ ಮಾತನಾಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. "ಸರ್ವೈವರ್' ಕುರಿತು ನೀವು ಆಡಿದ ಮಾತುಗಳು ನಮ್ಮ ನಡುವಿನ ಅತ್ಯುತ್ತಮ ಸಂಭಾಷಣೆ. 94 ವರ್ಷಗಳ ಕಾಲ ಸಿನಿಮಾವನ್ನೇ ಉಸಿರಾಗಿಸಿಕೊಂಡು, ಕೊನೆಯ ಉಸಿರಿನವರೆಗೂ ಅದಕ್ಕಾಗಿ ಸರ್ವಸ್ವವನ್ನೂ ಅರ್ಪಿಸುವ ವಿಷಯವನ್ನು ನಿಮ್ಮಷ್ಟು ಚೆನ್ನಾಗಿ ಬೇರೆ ಯಾರೂ ಹೇಳಲಾರರು. ಮರಳಿ ಬನ್ನಿ ಸರ್! ನೀವು ಎಂದೆಂದಿಗೂ ಶ್ರೇಷ್ಠರಾಗಿರುತ್ತೀರಿ" ಎಂದು ಟ್ವೀಟ್ ಮಾಡಿದ್ದಾರೆ.