ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂದು ಕಮಲ್ ಹಾಸನ್ ನೀಡಿದ್ದ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಅಂದು ಶಿವರಾಜ್‌ಕುಮಾರ್ ಎದುರೇ ಕಮಲ್ ಈ ಮಾತು ಆಡಿದ್ದರು. ಶಿವಣ್ಣ ಯಾಕೆ ಈ ಬಗ್ಗೆ ಪ್ರಶ್ನಿಸಲಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಇದೀಗ 'ಹಿಂದಿ ರಾಷ್ಟ್ರಭಾಷೆ' ಎಂದು ಹೇಳಿ ಮತ್ತೆ ಶಿವರಾಜ್‌ಕುಮಾರ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇತ್ತೀಚೆಗೆ ಆರ್‌. ಚಂದ್ರು ನಿರ್ದೇಶನದ 'ಒರಿಜಿನಲ್ ಮಾನ್‌ಸ್ಟರ್' ಸಿನಿಮಾ ಮುಹೂರ್ತ ಸಮಾರಂಭ ನಡೀತು. ಶಿವರಾಜ್‌ಕುಮಾರ್ ಹಾಗೂ ಚಂದ್ರು ಕಾಂಬಿನೇಷನ್ ಮಹತ್ವಾಕಾಂಕ್ಷೆಯ ಸಿನಿಮಾ ಇದು. ಏಕಕಾಲಕ್ಕೆ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ಚಿತ್ರದ ಟೈಟಲ್ ಅನಾವರಣ ಆಗಿತ್ತು. ಮುಹೂರ್ತ ಸಮಾರಂಭದ ಬಳಿಕ ಮಾಧ್ಯಮದವರ ಪ್ರಶ್ನೆಗಳಿಗೆ ಚಿತ್ರತಂಡ ಉತ್ತರಿಸಿತು.

ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಚಿತ್ರೀಕರಣವಾಗುತ್ತದೆ ಎಂದು ಚಿತ್ರತಂಡ ಹೇಳಿದೆ. ಹಿಂದಿ ಭಾಷೆಯಲ್ಲಿ ನೀವೇ ಡಬ್ಬಿಂಗ್ ಮಾಡ್ತೀರಾ ಎನ್ನುವ ಪ್ರಶ್ನೆಗೆ ಶಿವರಾಜ್‌ಕುಮಾರ್ ಉತ್ತರಿಸಿದ್ದಾರೆ. ಖಂಡಿತ ನಾನೇ ಡಬ್ ಮಾಡ್ತೀನಿ. "ನನ್ನ ಸೆಕೆಂಡ್ ಲಾಂಗ್ವೇಜ್ ಹಿಂದಿ.. ನಾನು ಹಿಂದಿ ಮಾತನಾಡ್ತೀನಿ.. ಹಿಂದಿ ಬಹಳ ಸುಲಭವಾದ ಭಾಷೆ.. ರಾಷ್ಟ್ರೀಯ ಭಾಷೆ.. ಮಾತನಾಡಲು ಬರುತ್ತೆ" ಎಂದಿದ್ದಾರೆ.

ಭಾರತ ದೇಶದ ಸಂವಿಧಾನದ ಪ್ರಕಾರ ಹಿಂದಿ ರಾಷ್ಟ್ರ ಭಾಷೆ ಅಲ್ಲ, ಅದು ಬರೀ ಕೇಂದ್ರ ಸರ್ಕಾರದ ಅಧಿಕೃತ ಭಾಷೆ ಮಾತ್ರ. ಆದರೆ ಸಾಕಷ್ಟು ಜನ ಹಿಂದಿ ನಮ್ಮ ರಾಷ್ಟ್ರಭಾಷೆ ಎಂದು ಭಾವಿಸಿದ್ದಾರೆ. ಭಾರತಕ್ಕೆ ನಿರ್ದಿಷ್ಟವಾದ ಯಾವುದೇ ಒಂದು 'ರಾಷ್ಟ್ರ ಭಾಷೆ' ಇದೆ ಎಂದು ಸಂವಿಧಾನದಲ್ಲಿ ಘೋಷಿಸಿಲ್ಲ. ಕೆಲ ನ್ಯಾಯಾಲಯಗಳು ಕೂಡ ಇದನ್ನು ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಶಿವಣ್ಣ ಯಾಕೆ ಹೀಗೆ ಹೇಳಿದ್ರು, ಇದರಿಂದ ತಪ್ಪು ಸಂದೇಶ ರವಾನೆ ಆಗುತ್ತದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಾತನಾಡುವ ಭರದಲ್ಲಿ ಬಾಯ್ತಪ್ಪಿ ಶಿವಣ್ಣ ಹೀಗೆ ಹೇಳಿರಬಹುದು. ಇದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಬಹಳ ವರ್ಷಗಳಿಂದ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದೇ ಬಿಂಬಿಸಲಾಗಿದೆ. ಹಾಗಾಗಿ ಸಹಜವಾಗಿ ಹೀಗೆ ಮಾತನಾಡಿರಬಹುದು ಎಂದು ಅಭಿಮಾನಿಗಳು ಶಿವಣ್ಣನ ಬೆಂಬಲಕ್ಕೆ ನಿಂತಿದ್ದಾರೆ.