ಒಂದ್ಕಡೆ ಶಿವರಾಜ್‌ಕುಮಾರ್ ನಟನೆಯ 'ಬೇಲ್' ಸಿನಿಮಾ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ತಿದೆ. ಮತ್ತೊಂದು ಕಡೆ ಸದ್ದಿಲ್ಲದೇ 'ಒರಿಜಿನಲ್ ಮಾನ್ ಸ್ಟರ್'(OG) ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 'ಕಬ್ಜ' ಬಳಿಕ ಬಳಿಕ ಆರ್. ಚಂದ್ರು ನಿರ್ದೇಶನದ ಸಿನಿಮಾ ಇದು. ತಮ್ಮದೇ ಬ್ಯಾನರ್ ಅಡಿಯಲ್ಲಿ ಆರ್. ಚಂದ್ರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಎರಡೂವರೆ ವರ್ಷಗಳ ನಂತರ 'ಒರಿಜಿನಲ್ ಮಾನ್ ಸ್ಟರ್' ಚಿತ್ರವನ್ನು ಆರ್‌. ಚಂದ್ರು ಕೈಗೆತ್ತಿಕೊಂಡಿದ್ದಾರೆ. ಆನಂದ್ ಪಂಡಿತ್ ಅರ್ಪಿಸುವ, ಆರ್ ಸಿ ಸ್ಟುಡಿಯೋಸ್ ಲಾಂಛನದಲ್ಲಿ ಯಮುನ ಚಂದ್ರು ಅವರು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಮುಂಬೈನಲ್ಲಿ ಟೈಟಲ್ ಲಾಂಚ್ ಮಾಡಿದ್ದ ಚಿತ್ರತಂಡ ಬಳಿಕ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನೆರವೇರಿಸಿತ್ತು.

ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್‌ಗಳಲ್ಲಿ 'ಒರಿಜಿನಲ್ ಮಾನ್ ಸ್ಟರ್'(OG) ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ. ಶಿವರಾಜಕುಮಾರ್, ತೆಲುಗು ನಟ ಸುನೀಲ್ ಹಾಗೂ ಅನೇಕ ಕಲಾವಿದರು ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆರ್. ಚಂದ್ರು ನಿರ್ದೇಶನದ 'ಮೈಲಾರಿ' ಚಿತ್ರದಲ್ಲಿ ನಟಿಸಿ ಶಿವಣ್ಣ ಗೆದ್ದಿದ್ದರು. ಬಳಿಕ 'ಕಬ್ಜ' ಚಿತ್ರದ ಕೊನೆಯಲ್ಲಿ ಅತಿಥಿ ಪಾತ್ರದಲ್ಲಿ ದರ್ಶನ ಕೊಟ್ಟು ಸೆಂಚುರಿ ಸ್ಟಾರ್ ಅಬ್ಬರಿಸಿದ್ದರು. ಈಗ ಅದೇ ಕಾಂಬಿನೇಶನ್‌ನಲ್ಲಿ 'ಒರಿಜಿನಲ್ ಮಾನ್ ಸ್ಟರ್' (OG) ಚಿತ್ರ ಮೂಡಿಬರುತ್ತಿದ್ದು, ಈ ಚಿತ್ರ ಆರಂಭದಲ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ಎ ಜೆ ಅವರ ಛಾಯಾಗ್ರಹಣವಿದೆ. ಪರಭಾಷೆಯ ಖ್ಯಾತ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಶೀಘ್ರದಲ್ಲೇ ಆ ಬಗ್ಗೆ ಮಾಹಿತಿ ಸಿಗಲಿದೆ.

'ಬೇಲ್' ಬೆನ್ನಲ್ಲೇ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಿರುವ 'ಜೈಲರ್- 2' ಸಿನಿಮಾ ಬಿಡುಗಡೆ ಆಗಲಿದೆ. ಬಳಿಕ ಕನ್ನಡ 'ಡ್ಯಾಡ್' ಹಾಗೂ ತಮಿಳಿನ 'ಪಿಕಾಸೋ' ಸಿನಿಮಾಗಳು ಬಿಡುಗಡೆ ಆಗಲಿದೆ. ಹೀಗೆ ಮುಂದೆ ಸಾಲು ಸಾಲು ಚಿತ್ರಗಳಲ್ಲಿ ಸೆಂಚುರಿ ಸ್ಟಾರ್ ಮಿಂಚಲಿದ್ದಾರೆ.