ಆನಂದ್ ವಿಕಟನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್ ಆಡಿದ ಅದೊಂದು ಮಾತು ಭಾರೀ ಚರ್ಚೆ ಹುಟ್ಟಾಕ್ಕಿದೆ. ಕನ್ನಡ ಸಿನಿಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಮಿಳು ಯುವನಟ, ನಿರ್ದೇಶಕ ಪ್ರದೀಪ್ ರಂಗನಾಥನ್ ಬಗ್ಗೆ ವೇದಿಕೆಯಲ್ಲಿ ಶಿವಣ್ಣ ಆಡಿದ ಮಾತುಗಳು ಕೆಲವರ ಬೇಸರಕ್ಕೆ ಕಾರಣವಾಗಿದೆ. ಕಿರಿಯ ತಮಿಳು ನಟನಿಗೆ "ಸರ್" ಎಂದು ಕರೆಯಬೇಡಿ ಶಿವಣ್ಣ, ನಿಮ್ಮ ಸ್ಥಾನವೇ ಬೇರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಒಬ್ಬರಿಗೆ ಗೌರವ ಕೊಡುವುದು ತಪ್ಪಾ? ಅದಕ್ಕೂ ನಿಮ್ಮ ಅನುಮತಿ ಬೇಕಾ? ಶಿವಣ್ಣ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂದು ನೀವೇ ನಿರ್ಧರಿಸುತ್ತೀರಾ? ಎಂದು ಕೆಲ ಅಭಿಮಾನಿಗಳು ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ. ತಮಗಿಂತ ಕಿರಿಯ ನಟನಿಗೆ ಶಿವಣ್ಣ ಗೌರವದಿಂದ ಮಾತನಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹೊಸ ನಟರ ಸಿನಿಮಾಗಳನ್ನು ನೋಡಿ ಮೆಚ್ಚಿದ್ದಾರೆ. ವೇದಿಕೆಯಲ್ಲೇ ಬಹಿರಂಗವಾಗಿ ನಾನು ನಿಮ್ಮ ಅಭಿಮಾನಿ ಎಂದು ಹೇಳಿದ್ದಾರೆ. ಅದನ್ನೆಲ್ಲಾ ಮರೆತು ಮಾತನಾಡಬೇಡಿ ಎಂದು ಬೆಂಬಲಕ್ಕೆ ನಿಂತಿದ್ದಾರೆ.
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ನಟನೆಯನ್ನು ಶಿವಣ್ಣ ಹಾಡಿ ಹೊಗಳಿದ್ದರು. ಆಗ ರಕ್ಷಿತ್ ಇನ್ನು ದೊಡ್ಡ ಸ್ಟಾರ್ ಆಗಿರಲಿಲ್ಲ. ವೇದಿಕೆಯಲ್ಲೇ "ನಾನು ನಿಮ್ಮ ನಟನೆ ನೋಡಿ ಅಭಿಮಾನಿ ಆಗಿಬಿಟ್ಟೆ ಎಂದು ರಕ್ಷಿತ್ ಶೆಟ್ಟಿಗೆ ಶಿವಣ್ಣ ಹೇಳಿದ್ದರು. ಅದನ್ನೆಲ್ಲಾ ಮರೆಯಬೇಡಿ, ಇಲ್ಲಿದೆ ನೋಡಿ ಅದಕ್ಕೆ ಸಾಕ್ಷಿ" ಎಂದು ಶಿವಣ್ಣನ ಅಭಿಮಾನಿಗಳು ವೀಡಿಯೋ ಹುಡುಕಿ ತಂದಿದ್ದಾರೆ. ಸೆಂಚುರಿ ಸ್ಟಾರ್ ಸರಳತೆ ಸಜ್ಜನಿಕೆ ಬಗ್ಗೆ ಹೊಸದಾಗಿ ಹೇಳುವುದು ಬೇಡ. ನಮ್ಮ ಶಿವಣ್ಣ ಏನು ಎನ್ನುವುದು ನಮಗೆ ಗೊತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಅಷ್ಟಕ್ಕೂ ಯಾಕೆ ಇಷ್ಟೆಲ್ಲಾ ಚರ್ಚೆ ಎನ್ನುವುದಕ್ಕೆ ಕಾರಣ ಇತ್ತೀಚೆಗೆ ನಡೆದ ತಮಿಳು ಕಾರ್ಯಕ್ರಮ. ಶಿವಣ್ಣ ಕೂಡ ಆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. 'ಲವ್ ಟು ಡೇ', 'ಡ್ರ್ಯಾಗನ್', 'ಡ್ಯೂಡ್' ರೀತಿಯ 3 ಹಿಟ್ ಸಿನಿಮಾಗಳಲ್ಲಿ ಪ್ರದೀಪ್ ರಂಗನಾಥನ್ ನಟಿಸಿ ಸಕ್ಸಸ್ ಕಂಡಿದ್ದಾರೆ. ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಪ್ರದೀಪ್ ಬಗ್ಗೆ ಶಿವಣ್ಣ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈ ವೇಳೆ "ಪ್ರದೀಪ್ ಸರ್, ನಿಮ್ಮ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ನಾನು ನಿಮ್ಮ ಅಭಿಮಾನಿ.. ನನಗೆ ಧನುಷ್ ಕಂಡ್ರೆ ಬಹಳ ಇಷ್ಟ. ನಿಮ್ಮನ್ನು ನೋಡಿದಾಗಲೆಲ್ಲ, ಧನುಷ್ ಅವರನ್ನೇ ನೋಡಿದಂತೆ ಭಾಸವಾಗುತ್ತೆ. ನೀವೊಬ್ಬರು ಅದ್ಭುತ ನಿರ್ದೇಶಕ ಹಾಗೂ ಉತ್ತಮ ನಟ" ಎಂದಿದ್ದರು.
ಆದರೆ ಇದೇ ಮಾತು ಕನ್ನಡ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ. ಡಾ. ರಾಜ್‌ಕುಮಾರ್ ರೀತಿಯ ಮೇರು ನಟನ ಮಗ, 130 ಸಿನಿಮಾಗಳಲ್ಲಿ ನಟಿಸಿ ಇವತ್ತಿಗೂ ಬಹುಬೇಡಿಕೆಯ ನಟನಾಗಿ ಶಿವಣ್ಣ ಮೆರೆಯುತ್ತಿದ್ದಾರೆ. ಇಂತಿಪ್ಪ ಶಿವಣ್ಣ ನಿನ್ನೆ ಮೊನ್ನೆ ಬಂದ ತಮಿಳು ಯುವನಟನನ್ನು 'ಸರ್' ಎಂದು ಕರೆಯುವುದು, ನಿಮ್ಮ ನಟನೆಗೆ ನಾನು ಅಭಿಮಾನಿ ಎನ್ನುವುದು ಯಾಕೋ ಸರಿ ಕಾಣುತ್ತಿಲ್ಲ. ಇತ್ತೀಚೆಗೆ ತಮಿಳು ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಹಾಗಾಗಿ ತಮಿಳು ಪ್ರೇಕ್ಷಕರನ್ನು ಮೆಚ್ಚಿಸಲು ಅವರು ಈ ರೀತಿ ಮಾತನಾಡುತ್ತಿದ್ದಾರಾ? ಇದೆಲ್ಲಾ ಬೇಕಿಲ್ಲ, ಕನ್ನಡದಲ್ಲೇ ನಿಮಗೆ ಒಳ್ಳೆ ಅವಕಾಶಗಳು, ಅಭಿಮಾನಿಗಳ ಪ್ರೀತಿ ಎಲ್ಲವೂ ಇದೆ, ಅಷ್ಟು ಸಾಕು ಬನ್ನಿ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶಿವಣ್ಣನ ಅಭಿಮಾನಿಗಳು ಮಾತ್ರ ನೆಚ್ಚಿನ ನಟನ ಬೆನ್ನಿಗೆ ನಿಂತಿದ್ದಾರೆ. ಅವರು ಆಡಿದ ಮಾತಿನಲ್ಲಿ ಯಾವುದೇ ತಪ್ಪಿಲ್ಲ. ಸುಖಾಸುಮ್ಮನೆ ಏನೇನೋ ಕಾಮೆಂಟ್ ಮಾಡಬೇಡಿ ಎನ್ನುತ್ತಿದ್ದಾರೆ.