ತಮಿಳಿನ 'ಡೇರ್ ಡೆವಿಲ್' ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ನಟಿಸುವುದು ಖಚಿತವಾಗಿದೆ. ಅಜಿತ್ ನನ್ನ ನೆಚ್ಚಿನ ನಟ, ಅವರೊಟ್ಟಿಗೆ ನಟಿಸೋ ಅವಕಾಶ ಸಿಕ್ಕರೆ ನಟಿಸುತ್ತೀನಿ ಎಂದು ಹೇಳಿದ್ದರು. ಅದು ನಿಜವಾಗುತ್ತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಸಹ ಶುರುವಾಗಿದೆ.

ಅದಿಕ್ ರವಿಚಂದ್ರನ್ ನಿರ್ದೇಶನದ 'ಡೇರ್ ಡೆವಿಲ್' ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ ನಟ ಉನ್ನಿ ಮುಕುಂದನ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಇದೆಲ್ಲದರ ನಡುವೆ ಚಿತ್ರದಲ್ಲಿ ಶಿವಣ್ಣ ವಿಲನ್ ಆಗಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹೊರಬಂದಿದೆ. ನಿಜಕ್ಕೂ ಇದು ಸಾಹಸವೇ ಸರಿ. ಕನ್ನಡದಲ್ಲಿ ಹೀರೊ ಆಗಿ ನಟಿಸುತ್ತಿರುವ ಸೆಂಚುರಿ ಸ್ಟಾರ್ ತಮಿಳಿನಲ್ಲಿ ನೆಗೆಟಿವ್ ರೋಲ್ ಮಾಡುವುದು ಸರಿಯಲ್ಲ ಎನ್ನುವ ಚರ್ಚೆ ಶುರುವಾಗಿದೆ.

ಈಗಾಗಲೇ ತಮಿಳು, ತೆಲುಗು ಸಿನಿಮಾಗಳಲ್ಲಿ ಶಿವಣ್ಣ ನಟಿಸೋಕೆ ಆರಂಭಿಸಿದ್ದಾರೆ. ತೆಲುಗಿನ 'ಪೆದ್ದಿ' ಹಾಗೂ ತಮಿಳಿನ 'ಜೈಲರ್' ಚಿತ್ರಗಳಲ್ಲಿ ಪವರ್‌ಫುಲ್ ಪಾತ್ರಗಳಲ್ಲಿ ನಟಿಸಿದ್ದರು. ಅವರ ಅಭಿನಯಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಭಾರೀ ಬೇಡಿಕೆ ಸಹ ಶುರುವಾಗಿದೆ. ಆದರೆ ಈಗ ಏಕಾಏಕಿ ವಿಲನ್ ಆಗಿ ನಟಿಸೋಕೆ ಮುಂದಾಗಿದ್ದಾರೆ ಎನ್ನುವುದು ಬೇಸರದ ಸಂಗತಿ. ಅಜಿತ್ ತಮ್ಮ ಸ್ವಂತ ಬ್ಯಾನರ್‌ನಲ್ಲೇ 'ಡೇರ್ ಡೆವಿಲ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಸಹ ನಿರ್ದೇಶಕ ಸುರೇಶ್ ಚಂದ್ರ ಇದೀಗ ಪ್ರತಿಕ್ರಿಯಿಸಿದ್ದಾರೆ. "ಈ ಚಿತ್ರದಲ್ಲಿ ಪವರ್‌ಫುಲ್ ವಿಲನ್ ಪಾತ್ರವೊಂದಿದೆ, ಇದಕ್ಕಾಗಿ ನಾವು ಹಲವು ಹೆಸರುಗಳನ್ನು ಪರಿಗಣಿಸುತ್ತಿದ್ದೆವು. ಅಜಿತ್ ಸರ್ ಅವರಿಗೆ ಶಿವರಾಜ್‌ಕುಮಾರ್ ಸರ್ ಅವರ ಬಗ್ಗೆ ಅಪಾರ ಗೌರವವಿದೆ, ಹಾಗಾಗಿ ಅವರನ್ನು ಸಂಪರ್ಕಿಸಲು ನಾವು ನಿರ್ಧರಿಸಿದೆವು. ನಾಲ್ಕು ತಿಂಗಳ ಹಿಂದೆ ನಿರ್ದೇಶಕ ಅದಿಕ್ ಹೋಗಿ ಶಿವಣ್ಣನವರಿಗೆ ಕಥೆ ಹೇಳಿದ್ದರು. ಅವರು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ನಂತರ, ಸ್ವತಃ ಅಜಿತ್ ಸರ್ ಅವರೇ ಶಿವಣ್ಣನವರೊಂದಿಗೆ ಮಾತನಾಡಿದರು. ಇನ್ನೆರಡು ದಿನಗಳಲ್ಲಿ ಶಿವಣ್ಣ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

'ಡೇರ್ ಡೆವಿಲ್' ಚಿತ್ರದ ಪೋಷಕ ಪಾತ್ರದಲ್ಲಿ ಶಿವಣ್ಣ ನಟಿಸುತ್ತಾರೆ, ನರಸಿಂಹ ಹಾಗೂ ಗೌರ್ನಾಯ್ಡು ರೀತಿಯ ಪವರ್‌ಫುಲ್ ಪಾತ್ರ ಮಾಡ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ವಿಲನ್ ಆಗಿ ನಟಿಸುತ್ತಿರುವ ಸುದ್ದಿ ಇಷ್ಟವಾಗುತ್ತಿಲ್ಲ. ಸಿನಿಮಾ ಬರಲಿ, ಅದು ಯಾವ ರೀತಿಯ ಪಾತ್ರ ಎಂದು ಕಾದು ನೋಡೋಣ. ಆದರೂ ಇದೆಲ್ಲಾ ಬೇಕಿರಲಿಲ್ಲ. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಿವೆ. ಪರಭಾಷೆಯ ಸಿನಿಮಾಗಳಲ್ಲಿ ಒಳ್ಳೆ ಪಾತ್ರ ಸಿಕ್ಕಿದ್ರೆ ಮಾಡಲಿ, ವಿಲನ್ ಪಾತ್ರ ಬೇಡವಾಗಿತ್ತು ಎನ್ನುವುದು ಕೆಲವರ ಅಭಿಪ್ರಾಯ.

ಕನ್ನಡ ಹೀರೊಗಳು ವಿಲನ್ ಆಗಿ ನಟಿಸಿ ಬೇರೆ ಭಾಷೆಯ ನಟರಿಂದ ಒದೆ ತಿನ್ನುವುದನ್ನು ನೋಡಲು ಅಭಮಾನಿಗಳು ಸಿದ್ಧರಿಲ್ಲ. ಕಿಚ್ಚ ಸುದೀಪ್ ಕೂಡ ಬೇರೆ ಭಾಷೆಗಳಲ್ಲಿ ವಿಲನ್ ಆಗಿ ನಟಿಸಿದಾಗ ಅಭಿಮಾನಿಗಳು ಬೇಸರಗೊಂಡಿದ್ದರು. ಇತ್ತೀಚೆಗೆ ಅಂತಹ ಸಾಹಸ ಮಾಡಲು ಕಿಚ್ಚ ಹಿಂದೇಟು ಹಾಕುತ್ತಿದ್ದಾರೆ.