ತಮಿಳು ನಟ ಅಜಿತ್ ಒಂದ್ಕಡೆ ಕಾರ್ ರೇಸ್‌ನಲ್ಲಿ ಬ್ಯುಸಿ ಇರ್ತಾರೆ. ಮತ್ತೊಂದು ಕಡೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಅಜಿತ್ ನಟನೆಯ 'ಡೇರ್ ಡೆವಿಲ್' ಸಿನಿಮಾ ಸೆಟ್ಟೇರಿದೆ. ಅಜಿತ್ ಅನುಪಸ್ಥಿತಿಯಲ್ಲಿ ಪತ್ನಿ ಶಾಲಿನಿ ಚಿತ್ರದ ಮುಹೂರ್ತ ಸಮಾರಂಭಕ್ಕೆ ಹಾಜರಾಗಿದ್ದರು.

ಚೆನ್ನೈನಲ್ಲಿ ಪೂಜೆ ನೆರವೇರಿಸಿ 'ಡೇರ್ ಡೆವಿಲ್' ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಅಜಿತ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ 'ಡೇರ್ ಡೆವಿಲ್' ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ನಾಯಕಿಯಾಗಿ ಕನ್ನಡ ನಟಿ ಶ್ರೀಲೀಲಾ ಆಯ್ಕೆ ಆಗಿದ್ದಾರೆ. ಕೆಲ ದಿನಗಳ ಹಿಂದೆಯೇ ಇಂತಾದೊಂದು ಗುಸುಗುಸು ಕೇಳಿಬಂದಿತ್ತು. ಅದು ಈಗ ನಿಜವಾಗಿದೆ.

ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೊಡ್ಡ ಹಿಟ್ ಸಿಗದೇ ಇದ್ದರೂ ಸ್ಟಾರ್ ನಟರ ಜೊತೆ ನಟಿಸೋಕೆ ಅವಕಾಶ ಮಾತ್ರ ಸಿಕ್ತಿದೆ. 'ಗುಡ್ ಬ್ಯಾಡ್ ಅಗ್ಲಿ' ಬಳಿಕ 'ಡೇರ್ ಡೆವಿಲ್' ಚಿತ್ರಕ್ಕೂ ಅದಿಕ್ ರವಿಚಂದ್ರನ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಅನಿರುದ್ದ್ ರವಿಚಂದಿರನ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಬ್ರೇವ್ ಹಾರ್ಟ್ ಪ್ರೊಡಕ್ಷನ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಲಿದೆ.

ಶ್ರೀಲೀಲಾ ನಟಿಸಿದ ಸಿನಿಮಾಗಳೆಲ್ಲಾ ಕೈ ಕೊಡ್ತಿವೆ. ಆದರೂ ಸೌತ್ ಸಿನಿದುನಿಯಾದಲ್ಲಿ ಆಕೆಯ ಕ್ರೇಜ್ ಕಮ್ಮಿ ಆಗಿಲ್ಲ. ಅಜಿತ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದೇ ಅದಕ್ಕೆ ಸಾಕ್ಷಿ. ಇನ್ನು ಬಾಲಿವುಡ್‌ ಅಂಗಳದಲ್ಲಿ ಅನುರಾಗ್ ಬಸು ನಿರ್ದೇಶನದ ಚಿತ್ರದಲ್ಲಿ ಕಿಸ್ ಬೆಡಗಿ ನಟಿಸ್ತಿದ್ದಾರೆ. ತಮಿಳಿನಲ್ಲಿ ಧನುಷ್ ನಟನೆಯ 'ಓಂ' ಹಾಗೂ ರಜನಿಕಾಂತ್ ನಟನೆಯ 'ಧರ್ಮನ್' ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.