ಬರ್ತಾ ಬರ್ತಾ ಶಿವಣ್ಣನಿಗೆ ತೆಲುಗು, ತಮಿಳು ಸಿನಿಮಾಗಳ ಮೇಲೆ ಆಸಕ್ತಿ ಹೆಚ್ಚಾಗ್ತಿದೆ. 'ಜೈಲರ್' ಚಿತ್ರದಲ್ಲಿ ರಜನಿಕಾಂತ್ ಜೊತೆ ನಟಿಸಿದ ಬಳಿಕ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇದೀಗ ತಮಿಳಿನಲ್ಲಿ ಅಜಿತ್ ನಟನೆಯ 'ಡೇರ್ ಡೆವಿಲ್' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಇತ್ತೀಚೆಗೆ ಅಜಿತ್ ನಟನೆಯ 'ಡೇರ್ ಡೆವಿಲ್' ಸಿನಿಮಾ ಸೆಟ್ಟೇರಿತ್ತು. ಶ್ರೀಲೀಲಾ ನಾಯಕಿಯಾಗಿ ನಟಿಸುವುದು ಖಚಿತವಾಗಿದೆ. ಇದೀಗ ಪ್ರಮುಖ ಪಾತ್ರದಲ್ಲಿ ಸೆಂಚುರಿ ಸ್ಟಾರ್ ನಟಿಸ್ತಾರೆ ಎನ್ನುವುದು ಟಾಕ್ ಆಫ್ ದ ಟೌನ್ ಆಗಿದೆ. ಶೀಘ್ರದಲ್ಲೇ ಚಿತ್ರೀಕರಣಕ್ಕೂ ಹಾಜರಾಗುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಅದಿಕ್ ರವಿಚಂದ್ರನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಅದೇ ಪಾತ್ರ ಈಗ ಶಿವಣ್ಣನ ಪಾಲಾಗಿದೆ ಎನ್ನಲಾಗ್ತಿದೆ.
ಪಾರ್ಥಿಬನ್, ಪ್ರಭು, ಉನ್ನಿ ಮುಕುಂದನ್ ಚಿತ್ರದ ತಾರಾಗಣದಲ್ಲಿದ್ದಾರೆ. ಬ್ರೇವ್ ಹಾರ್ಟ್ಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸ್ವತಃ ಅಜಿತ್ ಪತ್ನಿ ಶಾಲಿನಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಒಂದ್ಕಡೆ ರೇಸ್ ಹಾಗೂ ಮತ್ತೊಂದು ಕಡೆ ಬೈಕ್ ರೈಡ್ ಎಂದು ಅಜಿತ್ ಬ್ಯುಸಿಯಾಗಿರುತ್ತಾರೆ. ನಡುವೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಅವರು ನಟಿಸಿದ 'ವಿಡಾಮುಯರ್ಚಿ' ಹಾಗೂ 'ಗುಡ್ ಬ್ಯಾಡ್ ಅಗ್ಲಿ' ಚಿತ್ರಗಳು ಬಿಡುಗಡೆ ಆಗಿತ್ತು. ಅದಿಕ್ ರವಿಚಂದ್ರನ್ ನಿರ್ದೇಶನದ 'ಗುಡ್ ಬ್ಯಾಡ್ ಅಗ್ಲಿ' ಹಿಟ್ ಆಗಿತ್ತು. ಅದೇ ಕಾಂಬಿನೇಷನ್‌ನಲ್ಲಿ 'ಡೇರ್ ಡೆವಿಲ್' ಸಿನಿಮಾ ಮೂಡಿ ಬರ್ತಿದೆ.
'ಜೈಲರ್- 2' ಚಿತ್ರದಲ್ಲಿ ನರಸಿಂಹ ಆಗಿ ಶಿವಣ್ಣ ಅಬ್ಬರಿಸಿ ಗೆದ್ದಿದ್ದಾರೆ. 'ಪಿಕಾಸೊ' ಎಂಬ ಮತ್ತೊಂದು ತಮಿಳು ಚಿತ್ರದಲ್ಲಿ ಪ್ರಮುಖ ಆ ಪಾತ್ರದಲ್ಲಿ ನಟಿಸ್ತಿದ್ದಾರೆ. ನಡುವೆ 'ಡೇರ್ ಡೆವಿಲ್' ಸಿನಿಮಾ ಸುದ್ದಿ ಬಂದಿದೆ. ಈ ಹಿಂದೆ 'ಧನುಷ್' ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲೂ ಸೆಂಚುರಿ ಸ್ಟಾರ್ ಮಿಂಚಿದ್ದರು. ತೆಲುಗಿನಲ್ಲಿ 'ಪೆದ್ದಿ' ಬಳಿಕ 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಕನ್ನಡದಲ್ಲಿ 'ಡ್ಯಾಡ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. '666 ಆಪರೇಷನ್ ಡ್ರೀಮ್ ಥಿಯೇಟರ್' ಹಾಗೂ 'A ಫಾರ್ ಆನಂದ್' ಸಿನಿಮಾಗಳ ಚಿತ್ರೀಕರಣ ನಡೀತಿದೆ. ಮುಂದಿನ ವರ್ಷ ಶಿವಣ್ಣನ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸಲಿದೆ. ಕೊನೆಯದಾಗಿ 'ಬೇಲ್' ಚಿತ್ರದಲ್ಲಿ ಅವರು ಅಬ್ಬರಿಸಿದ್ದರು. ಭಾರೀ ಓಪನಿಂಗ್ ಪಡೆದಿದ್ದ ಈ ಸಿನಿಮಾ ಬಳಿಕ ಮುಗ್ಗರಿಸಿತ್ತು. "ಅಜಿತ್ ನನ್ನ ನೆಚ್ಚಿನ ನಟ, ಅವರೊಟ್ಟಿಗೆ ನಟಿಸುವ ಆಸೆಯಿದೆ" ಎಂದು ಸಂದರ್ಶನವೊಂದರಲ್ಲಿ ಶಿವಣ್ಣ ಹೇಳಿದ್ದರು.
Thala + Shivanna =BLAST Make it happen @Adhikravi kodana kodi nandrikal 😭💥💯🧨#DareDevil #AjithKumar #Shivannapic.twitter.com/VTrOe8EM4k https://t.co/5oipulibqn
— Thangapandian (@Thangapandi8759) November 14, 2026