ದಸರಾ ಸಂಭ್ರಮದಲ್ಲಿ 'ಜೈಲರ್'- 2 ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗಿದೆ. ರಜನಿಕಾಂತ್ ಜೊತೆಗೆ ಮತ್ತೊಮ್ಮೆ ಶಿವಣ್ಣ ಜೊತೆಯಾಗಿರುವುದು ಕರ್ನಾಟಕದಲ್ಲಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗ್ತಿದೆ. ನಿರ್ಮಾಪಕ ಕೆ. ಮಂಜು ಭರ್ಜರಿ ಬೆಲೆಗೆ ಕರ್ನಾಟಕ ವಿತರಣೆ ಹಕ್ಕುಗಳನ್ನು ಕೊಂಡುಕೊಂಡಿದ್ದಾರೆ.

'ಪ್ರೇಮದ ಊರಲಿ', 'ಬೇಲ್', 'ಸಿಟಿಲೈಟ್ಸ್' ಚಿತ್ರಗಳು ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಕನ್ನಡದ ಸಿನಿಮಾಗಳಿಗೆ ಸಮಸ್ಯೆ ಆಗದಂತೆ 'ಜೈಲರ್'- 2 ಸಿನಿಮಾ ತೆರೆಗೆ ತರ್ತೀವಿ ಎಂದು ನಿರ್ಮಾಪಕ, ವಿತರಕ ಕೆ. ಮಂಜು ಸಿನಿಸಮಾಚಾರ.ಕಾಮ್ ವೆಬ್‌ಸೈಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ 'ಜೈಲರ್'- 2 ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕನ್ನಡ ಟ್ರೈಲರ್ ಯಾಕೆ ಇನ್ನು ಬಿಟ್ಟಿಲ್ಲ ಎಂದು ಸಿನಿರಸಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ಕೆ. ಮಂಜು "ಡಬ್ಬಿಂಗ್ ಕೆಲಸ ನಡೀತಿದೆ. ಆದಷ್ಟು ಬೇಗ ಕನ್ನಡ ಟ್ರೈಲರ್ ಬರುತ್ತೆ. ಅದಕ್ಕೆ ಕೊಂಚ ಸಮಯ ಬೇಕು" ಎಂದಿದ್ದಾರೆ.

ಡಿಸ್ಟ್ರಿಬ್ಯೂಷನ್ ರೈಟ್ಸ್ ಡೀಲ್ ಬಗ್ಗೆ ಮಾತನಾಡಿ "ಎಷ್ಟು ಹಣ ಎನ್ನುವ ಬಗ್ಗೆ ಚರ್ಚೆ ಫೈನಲ್ ಆಗಿಲ್ಲ.. ಸಿನ್ಮಾ ತಗೊಳ್ಳಿ, ರಿಲೀಸ್ ಮಾಡಿ, ಯಾವುದೇ ಕನ್ನಡ ಚಿತ್ರಕ್ಕೆ ತೊಂದರೆ ಆಗಬಾರದು, ಆ ರೀತಿ ನೋಡಿಕೊಳ್ಳಿ ಎಂದಿದ್ದಾರೆ. ಅದಕ್ಕೆ ತಕ್ಕಂತೆ ನಾವು ತಯಾರಿ ನಡೆಸಿದ್ದೀವಿ. ಕುಮಾರ್ ಫಿಲ್ಮ್ಸ್ ಮೂಲಕ ಬೆಂಗಳೂರಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ" ಎಂದಿದ್ದಾರೆ.

ಟಿಕೆಟ್ ದರ ಹೆಚ್ಚಳದ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಕೆ. ಮಂಜು ತಿಳಿಸಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಸಿನಿಮಾ ಮೂರು ವರ್ಷಗಳ ಹಿಂದೆ ಸೂಪರ್ ಹಿಟ್ ಆಗಿತ್ತು. ಕರ್ನಾಟಕದಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡಿತ್ತು. ಕನ್ನಡ ವರ್ಷನ್ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿತ್ತು. ಇದೀಗ ಸೀಕ್ವೆಲ್ ಸರದಿ. ಈ ಬಾರಿ ಶಿವಣ್ಣ, ಮೋಹನ್ ಲಾಲ್ ಜೊತೆಗೆ ಹೃತಿಕ್ ರೋಷನ್ ಕೂಡ ರಜನಿಕಾಂತ್ ಜೊತೆ ಕೈಜೋಡಿಸಿದ್ದಾರೆ.