ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ಜೈಲರ್' ಸರಣಿ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿವೆ. 3 ವರ್ಷಗಳ ಹಿಂದೆ ಬಂದಿದ್ದ 'ಜೈಲರ್' ಸಿನಿಮಾ ಮಾಡಿದ್ದ ಮ್ಯಾಜಿಕ್ ಗೊತ್ತೇಯಿದೆ. ಹಾಗಾಗಿ ಸೀಕ್ವೆಲ್ ಮಾಡುವ ಪ್ರಯತ್ನ ಮಾಡಿದ್ದರು. ಸದ್ಯ ತೆರೆಕಂಡ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಫಸ್ಟ್ ಹಾಫ್ ಚಿಂದಿ, ಸೆಕೆಂಡ್ ಹಾಫ್ ಆವರೇಜ್ ಎನ್ನುವ ಟಾಕ್ ಶುರುವಾಗಿದೆ.

ಒಂದು ಹಿಟ್ ಆಗಿರುವ ಚಿತ್ರದ ಸೀಕ್ವೆಲ್ ಮಾಡಿ ಗೆಲ್ಲುವುದು ಅಷ್ಟು ಸುಲಭವಲ್ಲ. ಇದು ನಿಜಕ್ಕೂ ಸವಾಲಿನ ಕೆಲಸ. 'ಬಾಹುಬಲಿ'- 2, 'ದೃಶ್ಯಂ-2', 'ಕೆಜಿಫ್- 2', 'ಪುಷ್ಪ- 2' ಹಾಗೂ 'ಧುರಂಧರ್- 2' ಚಿತ್ರಗಳು ಮಾತ್ರ ಆ ರೀತಿ ದೊಡ್ಡದಾಗಿ ಸಕ್ಸಸ್ ಕಂಡಿದ್ದವು. ಇದರಲ್ಲಿ ಕೂಡ ಕೆಲವರಿಗೆ ಸೀಕ್ವೆಲ್ ಇಷ್ಟವಾಗಿರಲಿಲ್ಲ. ಆದರೆ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿದ್ದವು. ಇನ್ನು 'ಕೆಜಿಫ್- 3', 'ಪುಷ್ಪ- 3' ಬರುವುದು ಖಚಿತವಾಗಿದೆ. ಅದೇ ರೀತಿ 'ಜೈಲರ್- 3' ಬಗ್ಗೆ ಕೂಡ ಸುಳಿವು ಸಿಕ್ಕಿದೆ.

ಓಪನ್ ಎಂಡಿಂಗ್ ಕ್ಲೈಮ್ಯಾಕ್ಸ್ ಇಟ್ಟು ಮತ್ತೊಂದು ಸೀಕ್ವೆಲ್ ಬಗ್ಗೆ ನೆಲ್ಸನ್ ಕುತೂಹಲ ಮೂಡುವಂತೆ ಮಾಡಿದ್ದಾರೆ. 'ರೋಬೊ' ಬಿಟ್ರೆ ಮತ್ಯಾವುದೇ ಸಿನಿಮಾ ಸೀಕ್ವೆಲ್ ರಜನಿಕಾಂತ್ ಒಪ್ಪಿಕೊಂಡಿರಲಿಲ್ಲ. ಸೂಪರ್ ಹಿಟ್ 'ಬಾಷಾ' ಹಾಗೂ 'ಪೇಟ' ಚಿತ್ರಗಳ ಸೀಕ್ವೆಲ್ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ನಿರ್ದೇಶಕರು ಬಂದು ಕಥೆ ಹೇಳಿದ್ದರು. ಆದರೆ ನನಗೆ ಯಾಕೋ ಇಷ್ಟವಾಗಲಿಲ್ಲ. ಬೇಡ ಎಂದಿದ್ದೆ. ಆದರೆ 'ಜೈಲರ್' ನೋಡಿದಾಗ ಕಥೆ ಮುಂದುವರೆಸಬಹುದು ಅನಿಸಿತು ಅದಕ್ಕೆ ಒಪ್ಪಿಕೊಂಡೆ ಎಂದು ಇತ್ತೀಚೆಗೆ ಸ್ವತಃ ರಜನಿಕಾಂತ್ ಹೇಳಿದ್ದರು.

ಯಾವುದೇ ಸೀಕ್ವೆಲ್ ಮೊದಲ ಭಾಗದ ಯಶಸ್ಸಿನ ಮೇಲೆ ನಿಂತಿರುತ್ತದೆ. ಒಂದೇ ಕಥೆಯನ್ನು ಎರಡು ಭಾಗಗಳಾಗಿ ಹೇಳುವುದು ಒಂದು ಸೂತ್ರ. ಆದರೆ ಒಂದು ಕಥೆಯ ಕೊನೆಯಲ್ಲಿ ಕಥೆಯನ್ನು ಮುಂದುವರೆಸಲು ಸಣ್ಣ ಲಿಂಕ್ ಇಟ್ಟುಎರಡನೇ ಭಾಗದ ಬಗ್ಗೆ ಕುತೂಹಲ ಕೆರಳಿಸುವುದು ಮತ್ತೊಂದು ವಿಧಾನ. ಸಾಕಷ್ಟು ಫಿಲ್ಮ್ ಮೇಕರ್ಸ್ ಇದೇ ಪ್ರಯತ್ನ ಮಾಡ್ತಿದ್ದಾರೆ. ಮುಂದೆ ಸೀಕ್ವೆಲ್ ಬರುತ್ತೋ ಬಿಡುತ್ತೋ ಸಣ್ಣ ಸುಳಿವು ಕ್ಲೈಮ್ಯಾಕ್ಸ್‌ನಲ್ಲಿ ಇಡ್ತಿದ್ದಾರೆ. ಅದು ಆ ಚಿತ್ರವನ್ನು ಮ್ಯಾಜಿಕ್ ಎನ್ನುವಂತೆ ಮುಗಿಸಲು ಕೂಡ ನೆರವಾಗುತ್ತದೆ.

ಹಾಗಾಗಿ 'ಜೈಲರ್'- 3 ಬರುತ್ತೋ ಬಿಡುತ್ತೋ ಆದರೆ ಅಂಥಾದೊಂದು ಸಾಧ್ಯತೆಗೆ ನೆಲ್ಸನ್ ವೇದಿಕೆ ಸಿದ್ಧಪಡಿಸಿದ್ದಾರೆ. ಇದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ರಜನಿಕಾಂತ್ ವಯಸ್ಸು 70 ದಾಟಿದೆ. ಮೊದಲಿನಂತೆ ಲವಲವಿಕೆಯಿಂದ ಅವರು ನಟಿಸೋಕೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಆಕ್ಷನ್ ಸಿನಿಮಾಗಳಲ್ಲಿ ಗತ್ತು ತೋರಿಸಲು ದೈಹಿಕವಾಗಿ ಕೂಡ ಸಮರ್ಥರಾಗಿರಬೇಕು. ಇನ್ನು ನಾಲ್ಕೈದು ಸಿನಿಮಾಗಳಲ್ಲಿ ನಟಿಸಿ ರಜನಿಕಾಂತ್ ಚಿತ್ರರಂಗದಿಂದ ದೂರಾಗುತ್ತಾರೆ ಎನ್ನಲಾಗ್ತಿದೆ. ಆ ಸಾಲಿಗೆ 'ಜೈಲರ್'- 3 ಚಿತ್ರ ಕೂಡ ಸೇರಿಕೊಳ್ಳುತ್ತಾ ಕಾದು ನೋಡಬೇಕು.