ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ನಿರ್ದೇಶನದ, ಶೈನ್ ಶೆಟ್ಟಿ ನಟನೆಯ 'ಶಂಕರಾಭರಣ' ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಶೈನ್ ಶೆಟ್ಟಿ ಶಂಕರಾಭರಣ ಬಸ್ ಡ್ರೈವರ್ ಆಗಿ ಬಣ್ಣ ಹಚ್ಚಿದ್ದಾರೆ. ಟೀಸರ್ ಮತ್ತು ಹಾಡುಗಳ ಮೂಲಕ ಭಾರಿ ಕುತೂಹಲ ಮೂಡಿಸಿದ್ದ ಚಿತ್ರ ಈಗ ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿದೆ.

ನಿರ್ದೇಶಕ ಸುಮಂತ್ ಭಟ್ ಮೊದಲ ಬಾರಿಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಶಂಕರಾಭರಣ ಹೆಸರಿನ ಬಸ್ ಪ್ರಮುಖ ಪಾತ್ರ ವಹಿಸಿದೆ. ಆ ಬಸ್ ಡ್ರೈವರ್ ಶಂಕರನ ಜೀವನದ ಕಥೆಯಿದು. ಸಂಪತ್ ಕುಮಾರ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಕರಾವಳಿ ಮತ್ತು ಮಲೆನಾಡಿ ಭಾಗಗಳಲ್ಲಿ ಖಾಸಗಿ ಬಸ್‌ಗಳ ಪ್ರಾಬಲ್ಯ ಇನ್ನು ಇದೆ. ಈ ಸಿನಿಮಾದ ಕಥೆ ಕೂಡ ಕರಾವಳಿ ಭಾಗದ ಸುತ್ತ ಮುತ್ತವೇ ಸಾಗುತ್ತೆ. ಸಾಲ ಮಾಡಿ ಬಸ್ ಕೊಂಡುಕೊಳ್ಳುವ ಖಾಸಗಿ ಬಸ್ ಓನರ್‌ಗಳ ಕಷ್ಟಗಳು, ಡ್ರೈವರ್ ಆಗಿ ಏನೆಲ್ಲ ಕಷ್ಟಗಳನ್ನುಎದುರಿಸಬೇಕು ಎನ್ನುವುದಕ್ಕೆ ಹಾರರ್ ಟಚ್ ಕೊಟ್ಟಿದ್ದಾರೆ.

ಸ್ವತಃ ಶೈನ್ ಶೆಟ್ಟಿ ಕಥೆ ಮಾಡಿ ನಟಿಸಿದ್ದಾರೆ. ಸಂಪೂರ್ಣ ಸಿನಿಮಾ ಕರಾವಳಿ ಭಾಗದ ಸುತ್ತಮುತ್ತವೆ ಚಿತ್ರೀಕರಣ ಮಾಡಲಾಗಿದೆ. ತಮ್ಮ ಜೀವನದಲ್ಲಿ ಹಾಗೂ ತಮ್ಮ ಸುತ್ತಮುತ್ತ ನೋಡಿದ ಒಂದಷ್ಟು ಅನುಭವವಗಳನ್ನೂ ಸೇರಿಸಿ ಕಥೆ ಸಿದ್ಧಪಡಿಸಿದ್ದಾರೆ. ಆ ಕಥೆಗೆ ಅಷ್ಟೆ ಸುಂದರವಾಗಿ ದೃಶ್ಯ ರೂಪ ಕೊಟ್ಟಿದೆ ಚಿತ್ರತಂಡ.

ಸ್ವತಃ ಶೈನ್ ಶೆಟ್ಟಿ 'ಶಂಕರಾಭರಣ' ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ರಂಗಸ್ಥಳ ಸ್ಟುಡಿಯೋ ಬ್ಯಾನರ್ ನಡಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಇಬ್ಬರೂ ಶೈನ್ ಜೊತೆ ಕೈಜೋಡಿಸಿದ್ದಾರೆ. ಕರಾವಳಿ ಭಾಗದ ಕಲಾವಿದರೇ ತಾರಾಗಣದಲ್ಲಿದ್ದಾರೆ. ಟ್ರೈಲರ್ ನೋಡುತ್ತಿದ್ದರೆ 'ಸು ಫ್ರಂ ಸೋ' ಸಿನಿಮಾ ನೆನಪಿಸುವಂತಿದೆ.

ನಾಯಕಿಯಾಗಿ ತನ್ವಿ ರಾಮ್ ಕಾಣಿಸಿಕೊಂಡಿದ್ದಾರೆ. ಮಲಯಾಳಂನಲ್ಲಿ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತನ್ವಿಗೆ ಇದು ಚೊಚ್ಚಲ ಕನ್ನಡ ಸಿನಿಮಾ. ಇನ್ನು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಪತ್ನಿ ಕೃತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ 'ಶಂಕರಾಭರಣ' ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನವೆಂಬರ್ 20ರಂದು ಸಿನಿಮಾ ತೆರೆಗೆ ಬರಲಿದೆ.