ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ಓಟಿಟಿಗೆ ಬಂದು ಸದ್ದು ಮಾಡ್ತಿದೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಎರಡು ದಿನಗಳಿಂದ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ಮೂರು ತಿಂಗಳ ಹಿಂದೆ ತೆರೆಗೆ ಬಂದಿದ್ದ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಆದರೆ ಓಟಿಟಿಗೆ ಬಂದು ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ.

ಪ್ರಶಾಂತ್ ಅಲಿಯಾಸ್ 'ಪಚ್ಚ' ಎಂಬ ಪವರ್‌ಫುಲ್ ಪಾತ್ರದಲ್ಲಿ ಸಂಚಿತ್ ನಟಿಸಿದ್ದಾರೆ. ವಿವೇಕ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ 2001ರಿಂದ 2011ರ ನಡುವಿನ ಮೈಸೂರಿನ ಹಿನ್ನೆಲೆ ಕಥೆ ಹೇಳಲಾಗಿದೆ. ಆ ಕಾಲಘಟ್ಟದಲ್ಲಿ ಸ್ಥಳೀಯ ರಾಜಕೀಯ, ಗ್ಯಾಂಗ್‌ಗಳ ನಡುವಿನ ಸಂಘರ್ಷ, ಕುಟುಂಬದ ಭಾವನೆಗಳು ಹಾಗೂ ಪ್ರೀತಿ ನಡುವೆ ನಾಯಕನ ಬದುಕು ತೆಗೆದುಕೊಳ್ಳುವ ತಿರುವುಗಳನ್ನು ಚಿತ್ರದಲ್ಲಿ ನೋಡಬಹುದು. ಮಯೂರ್ ಪಟೇಲ್, ಹಂಸಾ, ಉಗ್ರಂ ಮಂಜು, ಹರಿಣಿ ಶ್ರೀಕಾಂತ್ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

ಸದ್ಯ ಮನೆಯಲ್ಲೇ ಕೂತು 'ಮ್ಯಾಂಗೋ ಪಚ್ಚ' ಸಿನಿಮಾ ವೀಕ್ಷಿಸಬಹುದು. ಓಟಿಟಿಯಲ್ಲಿ ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಒಳ್ಳೆ ಸಿನಿಮಾ ಇದು, ಯಾಕೆ ಗೆಲ್ಲಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಂಚಿತ್ ಒಳ್ಳೆ ನಟ ಆಗ್ತಾರೆ

ಇದು ಸಂಚಿತ್ ಮೊದಲ ಪ್ರಯತ್ನದಂತೆ ಅಸ್ವಲ್ಪವೂ ಅನ್ನಿಸಲಿಲ್ಲ. ಅವರಲ್ಲಿ ಸಹಜ ಪ್ರತಿಭೆ, ಒಳ್ಳೆ ಸ್ಕ್ರೀನ್ ಪ್ರಸೆನ್ಸ್ ಇದೆ. ನಿಜಕ್ಕೂ ಅವರು ಕನ್ನಡ ಚಿತ್ರರಂಗದ ಮುಂದಿನ ದೊಡ್ಡ ತಾರೆಯಾಗುವ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಪ್ರಶಾಂತ್ ಗೌಡ ಎಂಬುವವರು ಟ್ವೀಟ್ ಮಾಡಿದ್ದಾರೆ.

ವೀಕೆಂಡ್ ಮಿಸ್ ಮಾಡಬೇಡಿ

ವಾರಾಂತ್ಯದಲ್ಲಿ ವೀಕ್ಷಿಸಲು JioHotstar ನಲ್ಲಿ 'MangoPachcha' ಉತ್ತಮ ಆಯ್ಕೆ. ಸಂಚಿತ್ ಸಂಜೀವ್ ಸ್ಕ್ರೀನ್ ಪ್ರಸೆನ್ಸ್ ಮತ್ತು ಸಹಜ ಅಭಿನಯವು ಖಂಡಿತವಾಗಿಯೂ ನನ್ನ ಗಮನ ಸೆಳೆದ ಅಂಶಗಳಾಗಿವೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಭರವಸೆ ಮೂಡಿಸುವ ನಟನೆ

ಹೊಸ ಪ್ರತಿಭೆ, ಆಕರ್ಷಕ ಕಥಾಹಂದರ ಮತ್ತು ಭರವಸೆ ಮೂಡಿಸುವ ಅಭಿನಯ.. 'ಮ್ಯಾಂಗೋ ಪಚ್ಚ' ಮೂಲಕ ಸಂಚಿತ್ ತಮ್ಮದೇ ಛಾಪು ಮೂಡಿಸಿದ್ದಾರೆ ಎನ್ನುವುದು ಇನ್ನೊಬ್ಬರ ಅಭಿಪ್ರಾಯ.

ಸಂಚಿತ್ ಡೈಲಾಗ್ ಡೆಲಿವರಿ ಸೂಪರ್

ಚಿತ್ರಮಂದಿರದಲ್ಲಿ ಕೂಡ ನೋಡಿದ್ದೆ, ಈಗ OTTಯಲ್ಲಿ ಮತ್ತೊಮ್ಮೆ ನೋಡಿದೆ. ಇದೊಂದು ಅತ್ಯುತ್ತಮ ಸಿನಿಮಾ. ಸಂಚಿತ್ ಡೈಲಾಗ್ ಡೆಲಿವರಿ ಸ್ಟೈಲ್ ಶೈಲಿ ಮತ್ತು ಸ್ಕ್ರೀನ್‌ ಪ್ರಸೆನ್ಸ್ ಚೆನ್ನಾಗಿದೆ. ಫ್ಯಾಮಿಲಿ ಆಡಿಯನ್ಸ್‌ಗೆ ಇದು ತುಂಬಾ ಇಷ್ಟವಾಗುತ್ತಿದೆ ಎಂದು ಕೇಶವ ಎಂಬುವವರು ಟ್ವೀಟಿಸಿದ್ದಾರೆ.

ಚೆನ್ನಾಗಿ ಮಾಡಬಹುದಿತ್ತು

ನನಗೆ 'ಅಷ್ಟೇನಾ ಈ ಸಿನಿಮಾ?' ಅನಿಸಿತು. ಒಂದು ವೇಳೆ... ಸಂಪೂರ್ಣ ಕಥೆಯನ್ನು ಮೊದಲಾರ್ಧದಲ್ಲೇ ಮುಗಿಸಿ, ಅದನ್ನು ಮುಂದುವರಿಸುವಂತೆ ದ್ವಿತೀಯಾರ್ಧವನ್ನು ರೂಪಿಸಿದ್ದರೆ, ಇದೊಂದು ಭರ್ಜರಿ 'ಮಾಸ್ ಎಂಟರ್‌ಟೈನರ್' ಆಗಿರುತ್ತಿತ್ತು.. ಸಂಚಿತ್ ಅವರ ನಟನೆ ಸಹಜ, ಉತ್ತಮ ಹಾಗೂ ಪರಿಪಕ್ವವಾಗಿದೆ ಎಂದು ಮತ್ತೊಬ್ಬರು ಹಂಚಿಕೊಂಡಿದ್ದಾರೆ.

ವಾಸ್ತವಕ್ಕೆ ಹತ್ತಿರವಾದ ಚಿತ್ರ

ಇಷ್ಟು ಸಹಜ ಮತ್ತು ವಾಸ್ತವಕ್ಕೆ ಹತ್ತಿರವಾದ ಸಿನಿಮಾ ನೋಡಿ ಬಹಳ ಕಾಲವೇ ಆಗಿತ್ತು. ಅತಿಯಾದ ಬಿಲ್ಡ್-ಅಪ್‌ಗಳಿಲ್ಲ, ಓವರ್ ಆಕ್ಟಿಂಗ್ ಇಲ್ಲ ಅಥವಾ ಅನಗತ್ಯ ಸಂಭಾಷಣೆಗಳಿಲ್ಲ. ಪರಿಶುದ್ಧವಾದ ಕಥಾ ನಿರೂಪಣೆ. ಸಂಚಿತ್ ಎಲ್ಲಿಯೂ ಹೊಸಬರಂತೆ ಕಾಣಲಿಲ್ಲ; ಅವರ ಅಭಿನಯ ಅದ್ಭುತವಾಗಿತ್ತು. ಅವರು ಖಂಡಿತವಾಗಿಯೂ ಚಿತ್ರರಂಗದಲ್ಲಿ ಬಹಳ ಕಾಲ ಉಳಿಯುತ್ತಾರೆ ಎಂದು ಸಂಪತ್ ಎಂಬುವವರು ಟ್ವೀಟ್ ಮಾಡಿದ್ದಾರೆ.