ತೆಲುಗು ನಟಿ ಸಮಂತಾ ಹಾಗೂ ರಾಜ್ ನಿಡುಮೋರು ದಂಪತಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ ಮೊದಲ ವಾರ ಹಸೆಮಣೆ ಏರಿದ್ದ ಜೋಡಿ ವರ್ಷ ಕಳೆಯುವ ಮುನ್ನ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಮಗನಿಗೆ ದೇವ್ ನಿಡುಮೊರು ಎಂದು ನಾಮಕರಣ ಮಾಡಿದ್ದಾರೆ.
ಸಮಂತಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಮುದ್ದಾದ ಮಗುವಿನ ಕೈಬೆರಳು ಹಿಡಿದ ಫೋಟೊವನ್ನು ದಂಪತಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಆಪ್ತರು ಲೈಕ್ಸ್ ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಿನ್ನೆ(ನವೆಂಬರ್ 19) ಮಗುವಿಗೆ ಸಮಂತಾ ಜನ್ಮ ನೀಡಿದ್ದಾರೆ. "ನಮ್ಮ ಮುದ್ದಾದ ಗಂಡು ಮಗು.. ದೇವ್ ನಿಡಿಮೋರು.. 19.11.2026..ನಮ್ಮ ಹೃದಯಗಳು ಕಂಡ ಅತ್ಯಂತ ಸಂತೋಷದ ಕ್ಷಣವಿದು" ಎಂದು ಸಮಂತಾ ಬರೆದುಕೊಂಡಿದ್ದಾರೆ.
'ಫ್ಯಾಮಿಲಿಮ್ಯಾನ್- 2' ವೆಬ್ ಸೀರಿಸ್ನಲ್ಲಿ ರಾಜ್ ಹಾಗೂ ಸ್ಯಾಮ್ ಮೊದಲಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಬಳಿಕ 'ಸಿಟಾಡೆಲ್' ಸರಣಿಗೂ ಇಬ್ಬರೂ ಜೊತೆಯಾಗಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಅದಾಗಲೇ ಇಬ್ಬರಿಗೂ ಬೇರೆ ಬೇರೆಯವರ ಜೊತೆ ಮದುವೆಯಾಗಿ ಡಿವೋರ್ಸ್ ಆಗಿತ್ತು. ಎರಡನೇ ಬಾರಿ ಇಬ್ಬರೂ ಪ್ರೀತಿ ಕಂಡುಕೊಂಡಿದ್ದರು.
ಕಳೆದ ವರ್ಷ ಡಿಸೆಂಬರ್ 1ರಂದು ಕೋಯಂಬತ್ತೂರಿನ ಇಶಾ ಫೌಂಡೇಷನ್ನಲ್ಲಿ ಸಮಂತಾ ಹಾಗೂ ರಾಜ್ ಮದುವೆ ಗುಟ್ಟಾಗಿ ನಡೆದಿತ್ತು. ಬಳಿಕ ಜೋಡಿ ಫೋಟೊಗಳನ್ನು ಹಂಚಿಕೊಂಡು ಮದುವೆ ವಿಚಾರ ಬಹಿರಂಗಪಡಿಸಿದ್ದರು. 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ಬಳಿಕ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಸಮಂತಾ ನಿರ್ಮಿಸಿ ನಟಿಸಿದ್ದ ಚಿತ್ರಕ್ಕೆ ರಾಜ್ ಕಥೆ ಬರೆದಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಮುಂದೆ ಸೀಕ್ವೆಲ್ ಮಾಡುವುದಾಗಿಯೂ ಜೋಡಿ ಹೇಳಿದೆ.