2020- 2021ರಲ್ಲಿ ಭಾರತ ಮತ್ತು ಚೀನಾ ಸೇನಾ ಯೋಧರ ನಡುವೆ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ 'ಮಾತೃಭೂಮಿ' ಸಿನಿಮಾ ನಿರ್ಮಾಣವಾಗಿದೆ. ಸಲ್ಮಾನ್ ಖಾನ್ ನಿರ್ಮಿಸಿ ನಟಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಡಿಸೆಂಬರ್ 4ರಂದು ತೆರೆಗೆ ಬರ್ತಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
16 ಬಿಹಾರ ರೆಜಿಮೆಂಟ್ ಕರ್ನಲ್ ಬಿ. ಸಂತೋಷ್ ಬಾಬು ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಚಿತ್ರಾಂಗದಾ ಸಿಂಗ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. 'ಮಾತೃಭೂಮಿ' ಚಿತ್ರಕ್ಕೆ ಅಪೂರ್ಣ ಲಾಖಿಯಾ ಆಕ್ಷನ್ ಕಟ್ ಹೇಳಿದ್ದಾರೆ. ಶಿವ್ ಅರೂರ್ ಹಾಗೂ ಸುರೇಶ್ ನಾಯರ್ ಚಿತ್ರಕ್ಕೆ ಕಥೆ ಬರೆದಿದ್ದು ಚಿಂತನ್ ಶಾ ಚಿತ್ರಥೆ ಸಂಭಾಷಣೆ ಒದಗಿಸಿದ್ದಾರೆ. 4 ನಿಮಿಷ 35 ಸೆಕೆಂಡ್ಗಳ ಸಿನಿಮಾ ಟ್ರೈಲರ್ ಸಲ್ಲು ಅಭಿಮಾನಿಗಳ ಮನಗೆದ್ದಿದೆ.
ಧೈರ್ಯವೆಂದರೆ ಯಾವಾಗಲೂ ಹೋರಾಡುವುದೇ ಅಲ್ಲ, ಅದು ಜಗಳವೊಂದನ್ನು ತಡೆಯುವುದೂ ಕೂಡ ಎಂದು ಕರ್ನಲ್ ಬಿ. ಸಂತೋಷ್ ಬಾಬು(ಸಲ್ಮಾನ್ ಖಾನ್) ಹೇಳುವ ಡೈಲಾಗ್ ಟ್ರೈಲರ್ನಲ್ಲಿದೆ. "ಏನೇ ಆದ್ರು ಸರಿ, ನಮ್ಮ ಕಡೆಯಿಂದ ಒಂದೇ ಒಂದು ಗುಂಡನ್ನೂ ಹಾರಿಸಬಾರದು" ಎನ್ನುವ ಮತ್ತೊಂದು ಡೈಲಾಗ್ ಕೂಡ ಇದೆ. "ಮಾನವೀಯತೆ ಹಾಗೂ ದೇಶಭಕ್ತಿ ಎಂದರೆ ಶತ್ರುಗಳನ್ನು ನಾಶಪಡಿಸುವುದಲ್ಲ, ಬದಲಾಗಿ ದ್ವೇಷವನ್ನೇ ನಿರ್ಮೂಲನೆ ಮಾಡುವುದು" ಎನ್ನುವ ಡೈಲಾಗ್ ಟ್ರೈಲರ್ ಕೊನೆಯಲ್ಲಿ ಹೈಲೆಟ್ ಆಗಿದೆ.
ಸೈನಿಕರ ತ್ಯಾಗ ಬಲಿದಾನದ ಜೊತೆಗೆ ಅವರ ವೈಯಕ್ತಿಕ ಜೀವನ ಹೇಗಿರುತ್ತದೆ. ಕುಟುಂಬಸ್ಥರನ್ನು ಬಿಟ್ಟು ದೇಶದ ಗಡಿ ಕಾಯುವ ಸೈನಿಕರ ಕಥೆಯನ್ನು 'ಮಾತೃಭೂಮಿ' ಚಿತ್ರದಲ್ಲಿ ಹೇಳುತ್ತಿರುವುದು ಗೊತ್ತಾಗುತ್ತಿದೆ. ಚೀನೀ ಸೈನಿಕರ ವಿರುದ್ಧ ಸೆಣಸುವ ನಾಯಕ ಶಾಂತಿ ಸಂದೇಶ ಸಾರುವುದನ್ನು ನೋಡಬಹುದು. ಸೈನಿಕರು ಮನೆಯಿಂದ ಹೊರಡುವಾಗ ಗುಡ್ ಬೈ ಹೇಳಲ್ಲ, ಸೆಲ್ಯೂಟ್ ಹೊಡಿತ್ತಾರೆ ಎಂದು ಮಕ್ಕಳಿಗೆ ನಾಯಕ ಹೇಳುವ ಸನ್ನಿವೇಶ ಗಮನ ಸೆಳೆಯುತ್ತದೆ.
ಚಿತ್ರದಲ್ಲಿ ಸಲ್ಮಾನ್ ಖಾನ್ ಸಿಕ್ಕಾಪಟ್ಟೆ ಯಂಗ್ ಲುಕ್ನಲ್ಲಿ ದರ್ಶನ ಕೊಟ್ಟಿದ್ದಾರೆ. ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿಯ ಮೇಜರ್ ಪಾತ್ರದಲ್ಲಿ ಅನೂಪ್ ವಿಕ್ರಮ್ ಶಾಹಿ ಕಾಣಿಸಿಕೊಂಡಿದ್ದಾರೆ. ಮುಖೇಶ್ ರಿಷಿ, ಅಂಕುರ್ ಭಾಟಿಯಾ, ಯಶಪಾಲ್ ಶರ್ಮಾ, ದಯಾ ಶಂಕರ್ ಪಾಂಡೆ ಹಾಗೂ ಅಭಿಲಾಷ್ ಚೌಧರಿ ಚಿತ್ರದ ತಾರಾಗಣದಲ್ಲಿದ್ದಾರೆ. ಡಿಸೆಂಬರ್ ಫಸ್ಟ್ ವೀಕ್ ಇತ್ತೀಚೆಗೆ ದೊಡ್ಡ ಸಿನಿಮಾಗಳಿಗೆ ಅದೃಷ್ಟವಾಗಿ ಪರಿಣಮಿಸುತ್ತಿದೆ. 'ಮಾತೃಭೂಮಿ' ಚಿತ್ರಕ್ಕೂ ಇದು ವರವಾಗುತ್ತಾ ಕಾದು ನೋಡಬೇಕಿದೆ.