ದೀಪದ ಕೆಳಗೆ ಕತ್ತಲು ಎನ್ನುವಂತೆ 'ರಾಮಾಯಣ' ಚಿತ್ರ ಸಾವಿರಾರು ಕೋಟಿ ಗಳಿಸಿದ್ರು, ಆ ದೃಶ್ಯಕಾವ್ಯಕ್ಕೆ ಕೆಲಸ ಮಾಡಿದವರಿಗೆ ಸಂಬಳ ಕೊಟ್ಟಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಯಶ್ ಹಾಗೂ ನಮಿತ್ ಮಲ್ಹೋತ್ರಾ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರ್ತಿದೆ.
ಈಗಾಗಲೇ ಚಿತ್ರದ ಮೊದಲ ಭಾಗ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಎರಡನೇ ಭಾಗ ನಿರೀಕ್ಷೆ ಹುಟ್ಟಾಕ್ಕಿದೆ. 'ರಾಮಾಯಣ' ಗೊತ್ತಿರುವ ಕಥೆ ಆಗಿದ್ದರೂ ಈಗಾಗಲೇ ಸಾಕಷ್ಟು ಬಾರಿ ತೆರೆಮೇಲೆ ನೋಡಿದ್ದರೂ ನಿತೇಶ್ ತಿವಾರಿ ಸಿನಿಮಾ ಅದ್ಭುತ ಅನುಭವ ನೀಡುತ್ತಿದೆ. ಅದಕ್ಕೆ ಕಾರಣ ವಿಷ್ಯುವಲ್ ಎಫೆಕ್ಟ್ಸ್. 8 ಆಸ್ಕರ್ ಗೆದ್ದಿರುವ DNEG ಸಂಸ್ಥೆ ಚಿತ್ರಕ್ಕೆ ಕೆಲಸ ಮಾಡಿದೆ. ಅದಕ್ಕೆ ಔಟ್ಫುಟ್ ಅಷ್ಟು ಮಜವಾಗಿದೆ. ಆದರೆ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗ್ತಿದ್ರೆ ಚಿತ್ರಕ್ಕಾಗಿ ದುಡಿದ ಆರ್ಟಿಸ್ಟ್ಗಳಿಗೆ ಸರಿಯಾಗಿ ಸಂಬಳ ಕೊಡದೇ ಕೆಲಸದಿಂದ ಕೈಬಿಟ್ಟಿರುವ ಆರೋಪ ಬಂದಿದೆ.
ನಮಿತ್ ಮಲ್ಹೋತ್ರಾ ಒಡೆತನದ ವಿಶುವಲ್ ಎಫೆಕ್ಟ್ಸ್ 'DNEG' ಸಂಸ್ಥೆ ಉದ್ಯೋಗಿ ತಮಗೆ ಮೋಸ ಆಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ರಾಹುಲ್ ಧನ್ವೆ ಎಂಬುವವರಯ ತಮ್ಮ LinkedIn ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಮಿತ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಮಿತ್ ಮಲ್ಹೋತ್ರಾ ಮತ್ತು 'ದಿ ರಾಮಾಯಣ ವರ್ಲ್ಡ್' (The Ramayana World) ತಂಡದವರೇ ಚೆನ್ನಾಗಿ ಆಡಿದ್ದೀರಿ.. ನಾನು DNEG ನಲ್ಲಿ 4.6 ವರ್ಷ ಕೆಲಸ ಮಾಡಿದ್ದೀನಿ, ಅದರಲ್ಲಿ ಕೊನೆಯ ಎರಡು ವರ್ಷಗಳನ್ನು 'ರಾಮಾಯಣ' ಚಿತ್ರಕ್ಕಾಗಿ ವ್ಯಯಿಸಿದ್ದೆ. ಕಠಿಣ ಸಮಯದಲ್ಲಿ ಕಂಪನಿಗೆ ಬೆಂಬಲ ನೀಡುವಂತೆ ಆಡಳಿತ ಮಂಡಳಿಯು ನಮ್ಮನ್ನು ಪದೇ ಪದೇ ಕೇಳಿಕೊಂಡಿತು. ನಾವು ಹಾಗೆಯೇ ಮಾಡಿದೆವು. ಪರಿಸ್ಥಿತಿ ಸುಧಾರಿಸಬಹುದು ಎಂಬ ಭರವಸೆಯಿಂದ, ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಒಂದೇ ಒಂದು ರೂಪಾಯಿ ಸಂಬಳ ಹೆಚ್ಚಳವಿಲ್ಲದೆ ನಾನು ಕೆಲಸ ಮಾಡಿದೆ. ಕೊನೆಗೆ ಕೆಲಸದಿಂದ ವಜಾ ಮಾಡಿದ್ರು ಎಂದು ರಾಹುಲ್ ಆರೋಪಿಸಿದ್ದಾರೆ.
ಕಂಪನಿ ಜೊತೆ ನಿಂತಿದ್ದಕ್ಕೆ ನನಗೆ ವಿಶೇಷ ಬಹುಮಾನವೇನೂ ಬೇಕಿರಲಿಲ್ಲ. ಆದರೆ ನನ್ನ ವೃತ್ತಿಜೀವನದ 4.6 ವರ್ಷ ಮೀಸಲಿಟ್ಟಿದ್ದಕ್ಕೆ ಇಂತಹ ಬಹುಮಾನ ನಿರೀಕ್ಷಿಸಿರಲಿಲ್ಲ. ನಾವು 'ರಾಮಾಯಣ' ಚಿತ್ರಕ್ಕಾಗಿ 2 ವರ್ಷಗಳ ಕಠಿಣ ಪರಿಶ್ರಮ, ಕೌಶಲ್ಯ ಮತ್ತು ಸಮರ್ಪಣಾ ಭಾವದಿಂದ ದುಡಿದಿದ್ದೇವೆ. ಸಾಕಷ್ಟು ತ್ಯಾಗ ಮಾಡಿದ್ದೀವಿ, ಆದರೆ ಯಾವುದೇ ಲಾಭ ಸಿಕ್ಕಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವೇನೋ ಧರ್ಮಕ್ಕಾಗಿ ಕೆಲಸ ಮಾಡಿದಂತಿದೆ. ನಮ್ಮನ್ನು ಯೂಸ್ ಅಂಡ್ ಥ್ರೋ ರೀತಿ ಬಳಸಿಕೊಂಡರು. ನನ್ನ ವೃತ್ತಿಜೀವನದ 4.6 ವರ್ಷ ವ್ಯರ್ಥವಾಯ್ತು.. ಸದ್ಯ 'ರಾಮಾಯಣ' ಭಾಗ- 2 ಚಿತ್ರಕ್ಕೆ ಕೆಲಸ ಮಾಡುತ್ತಿರುವ ಆರ್ಟಿಸ್ಟ್ ಬಗ್ಗೆ ನನಗೆ ಚಿಂತೆಯಿದೆ. ಅವರಿಗೂ ಇಂತಹ ಪರಿಸ್ಥಿತಿ ಎದುರಾಗದಿರಲಿ ಎಂದು ನಾನು ಆಶಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.