ನಿತೇಶ್ ತಿವಾರಿ ನಿರ್ದೇಶನದಲ್ಲಿ ಎರಡು ಭಾಗಗಳಾಗಿ 'ರಾಮಾಯಣ' ತೆರೆಗೆ ಬರ್ತಿರೋದು ಗೊತ್ತೇಯಿದೆ. ಈಗಾಗಲೇ ಮೊದಲ ಭಾಗ ತೆರೆಗಪ್ಪಳಿಸಿ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಎರಡು ಭಾಗವನ್ನು 2028ರಲ್ಲಿ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಈ ನಡುವೆ ಎರಡಲ್ಲ, ಮೂರು ಭಾಗಗಳಲ್ಲಿ ಸಿನಿಮಾ ಬರುತ್ತೆ ಎನ್ನುವ ಚರ್ಚೆ ಶುರುವಾಗಿದೆ.
ಮೊದಲಿಗೆ 'ರಾಮಾಯಣ' ಕಾವ್ಯವನ್ನು ಮೂರು ಭಾಗಗಳಾಗಿ ತೆರೆಗೆ ತರಲು ನಮಿತ್ ಮಲ್ಹೋತ್ರಾ ಬಯಸಿದ್ದರಂತೆ. ಬಳಿಕ ಬೇಡ ಎಂದು ಎರಡು ಭಾಗಕ್ಕೆ ಇಳಿಸಿದ್ದರು. ಇದೀಗ ಮೊದಲ ಭಾಗ 1500 ಕೋಟಿ ರೂ. ಕೊಳ್ಳೆ ಹೊಡೆದು ಚಿತ್ರತಂಡದ ಹುಮ್ಮಸ್ಸು ಹೆಚ್ಚಿಸಿದೆ. ಪ್ರೇಕ್ಷಕರು ಕೂಡ ಸರಣಿ ಮುಂದುವರೆಸುವುದನ್ನು ಬಯಸುತ್ತಿದ್ದಾರೆ. ಹಾಗಾಗಿ ಮೊದಲು ಪ್ಲ್ಯಾನ್ ಮಾಡಿದಂತೆ ಯಾಕೆ ಮೂರು ಭಾಗಗಳಾಗಿ ಸಿನಿಮಾ ತೆರೆಗೆ ಬರುತ್ತಾ ಎನ್ನುವ ಗುಸುಗುಸು ಶುರುವಾಗಿದೆ.
ಸಂದರ್ಶನವೊಂದರಲ್ಲಿ ನಮಿತ್ ಮಲ್ಹೋತ್ರಾ ಮಾತನಾಡಿದ್ದರು. ಮೊದಲ ಭಾಗಕ್ಕೆ ಸಿಗುವ ರೆಸ್ಪಾನ್ಸ್ ನೋಡಿ ಮೂರನೇ ಭಾಗ ಮಾಡುವುದಾಗಿ ಹೇಳಿದ್ದರು. ಅವರು ಬಯಸಿದಂತೆ ಸಿನಿಮಾ ಗೆದ್ದಿದೆ. ಮೊದಲ ಭಾಗದಲ್ಲಿ ರಾಮ, ರಾವಣರ ಹಿಂದಿನ ಕಥೆಯಿಂದ ಆರಂಭಿಸಿ ಸೀತಾಪಹರಣದವರೆಗಿನ ಕಥೆ ಹೇಳಲಾಗಿದೆ. ಎರಡನೇ ಭಾಗದಲ್ಲಿ ರಾಮ-ಹನುಮಂತರ ಭೇಟಿ, ವಾಲಿ-ಸುಗ್ರೀವರ ಯುದ್ಧ ಹಾಗೂ ಹನುಮಂತ ಲಂಕೆ ಹೋಗಿ ಸೀತೆಯನ್ನ ಭೇಟಿ ಮಾಡಿ ಲಂಕೆ ಬೆಂಕಿ ಇಡುವ ಕಥೆಯನ್ನು ಹೇಳಬಹುದು. ಮೂರನೇ ಭಾಗದಲ್ಲಿ ರಾವಣ ಸಂಹಾರದ ಕಥೆಯನ್ನು ಹೇಳಲು ಅವಕಾಶ ಇದೆ ಎಂದು ಊಹಾಪೋಹ ಶುರುವಾಗಿದೆ.
ಎಲ್ಲರಿಗೂ ಗೊತ್ತಿರುವ 'ರಾಮಾಯಣ' ಕಥೆಯಲ್ಲಿ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಸೇರಿಸಿ ಚಿತ್ರಕಥೆ ಹೆಣೆಯಬಹುದು. ಮೇಘನಾಥನ ಆರ್ಭಟ, ಹನುಮಂತ ಸಂಜೀವಿನಿ ತರುವುದು ಸೇರಿದಂತೆ ಸಾಕಷ್ಟು ವಿಷಯಗಳನ್ನು ಮೂರನೇ ಭಾಗದಲ್ಲಿ ಹೇಳಬಹುದು. ಇದೇ ಕೋನದಲ್ಲಿ ಚಿತ್ರತಂಡ ಯೋಚಿಸಿದಂತಿದೆ. ಎರಡನೇ ಭಾಗದಲ್ಲಿ ಹನುಮಂತನ ಸಾಹಸಗಳನ್ನು ಸೊಗಸಾಗಿ ಹೇಳಲು ಅವಕಾಶವಿದೆ. ಇದೇ ಕಾರಣಕ್ಕೆ ಚಿತ್ರವನ್ನು ಮೂರು ಭಾಗಗಳಾಗಿ ತೆರೆಗೆ ತರಬಹುದು ಎನ್ನುವ ಊಹಾಪೋಹ ಶುರುವಾಗಿದೆ.
'ರಾಮಾಯಣ' ಚಿತ್ರದಲ್ಲಿ ವಿಶ್ವಾಮಿತ್ರ ಆಗಿ ಅಜಿಂಕ್ಯ ದೇವ್ ನಟಿಸಿದ್ದಾರೆ. ಸಿನಿಮಾ ಮೂರು ಭಾಗಗಳಾಗಿ ತೆರೆಗೆ ಬರುತ್ತಾ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. India TV ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. "ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಿರ್ಮಾಪಕರು ಯಾರಾದರೂ ಬಗ್ಗೆ ಮಾತನಾಡಬೇಕು. ಅದು ನಿಜವಾದ್ರೆ ನಾನು ಹೆಚ್ಚು ಸಂತೋಷಪಡುತ್ತೇನೆ. ಏಕೆಂದರೆ ನನಗೆ ಹೆಚ್ಚು ವಿಸ್ತಾರವಾದ ಪಾತ್ರವಿದೆ ಎಂದು ನಾನು ಭಾವಿಸುತ್ತೇನೆ. ಇದು ಸ್ವಾಗತಾರ್ಹ. ಮೂರು ಯಾಕೆ ಅವರು ಅದನ್ನು ಐದು ಭಾಗಗಳಲ್ಲಿ ಮಾಡಬೇಕು" ಎಂದಿದ್ದಾರೆ.