ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ 'ರಾಮಾಯಣ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಈಗಾಗಲೇ 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿದೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಸಿನಿಮಾ ನಿರ್ಮಿಸಿದ್ದಾರೆ. ಇದೀಗ ಹೃತಿಕ್ ರೋಷನ್ ಜೊತೆ ನಮಿತ್ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.
ವಿಷ್ಯುವಲ್ ಎಫೆಕ್ಟ್ಸ್ (VFX) ಸಂಸ್ಥೆಗಳಾದ ಪ್ರೈಮ್ ಫೋಕಸ್ ಲಿಮಿಟೆಡ್ (Prime Focus Limited) ನ ಸ್ಥಾಪಕರು ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಡಿಎನ್ಇಜಿ (DNEG) ಸಂಸ್ಥೆಯ ಸಿಇಓ ನಮಿತ್ ಮಲ್ಹೋತ್ರಾ. ಇದೀಗ ಅವರು ದೊಡ್ಡ ದೊಡ್ಡ ಸಿನಿಮಾಗಳ ಕನಸು ಕಾಣುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಯಶ್ ಇತ್ತೀಚೆಗೆ ವೇದಿಕೆಯಲ್ಲಿ ಹೇಳಿದ್ದರು. 'ರಾಮಾಯಣ' ಸಿನಿಮಾ ಎರಡು ಭಾಗಗಳಾಗಿ ಮಾಡುವುದು ಮಾತ್ರವಲ್ಲ ಸಾಕಷ್ಟು ದೊಡ್ಡ ಕನಸುಗಳು ಅವರಿಗಿದೆ. 'ರಾಮಾಯಾಣ' ಚಿತ್ರದ ಹನುಮ ಪಾತ್ರವನ್ನೇ ಆಧರಿಸಿ ಒಂದು ಸಿನಿಮಾ ಮಾಡುವ ಆಲೋಚನೆ ಕೂಡ ಅವರಲ್ಲಿದೆ. ಇದೆಲ್ಲದರ ನಡುವೆ ನಿಮಿತ್ ಯಾಕೆ ಹೃತಿಕ್ ರೋಷನ್ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ನಮಿತ್ ಹಾಗೂ ಹೃತಿಕ್ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. 'ರಾಮಾಯಣ' ಸರಣಿ ಚಿತ್ರದ ಯಾವುದೇ ಪಾತ್ರಕ್ಕಾಗಿ ಈ ಚರ್ಚೆ ನಡೀತಿಲ್ಲ, ಬದಲಿಗೆ 'ಕ್ರಿಶ್' ಸರಣಿಯ ಮುಂದಿನ ಚಿತ್ರದ ಬಗ್ಗೆ ಇಬ್ಬರೂ ಮಾತನಾಡುತ್ತಿದ್ದಾರೆ ಎನ್ನಲಾಗ್ತಿದೆ. ಹೃತಿಕ್ ರೋಷನ್ ನಟನೆಯ ಸೂಪರ್ ಹಿಟ್ ಸರಣಿ ಸಿನಿಮಾ ಇದು. ಈಗಾಗಲೇ ಚಿತ್ರದ 4ನೇ ಭಾಗ ಘೋಷಣೆಯಾಗಿದೆ. ಸ್ವತಃ ಹೃತಿಕ್ ರೋಷನ್ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎನ್ನಲಾಗ್ತಿದೆ. ಚಿತ್ರದ ಗ್ರಾಫಿಕ್ಸ್ ಹಾಗೂ ವಿಷ್ಯುವಲ್ಸ್ ಬಗ್ಗೆ ನಮಿತ್-ಹೃತಿಕ್ ಚರ್ಚಿಸುತ್ತಿದ್ದಾರೆ ಎನ್ನಲಾಗ್ತಿದೆ.
'ಕ್ರಿಶ್' ಕೂಡ ಸೂಪರ್ ಹೀರೊ ಸಿನಿಮಾ. ಅದ್ಧೂರಿ ವಿಷ್ಯುವಲ್ಸ್, ಗ್ರಾಫಿಕ್ಸ್ ಈ ಚಿತ್ರದಲ್ಲಿ ಹೈಲೆಟ್. ಈಗಾಗಲೇ ಹಿಂದಿನ ಸಿನಿಮಾಗಳಲ್ಲಿ ಅದನ್ನು ನೋಡಿದ್ದೇವೆ. ಈ ಬಾರಿ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಹೃತಿಕ್ ರೋಷನ್ ಮನಸ್ಸು ಮಾಡಿದ್ದಾರೆ. ಹಾಗಾಗಿ ನಮಿತ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. 'ರಾಮಾಯಣ' ವಿಷ್ಯುವಲ್ ನೋಡಿ ಹೃತಿಕ್ ಫಿದಾ ಆಗಿದ್ದು ನಮಿತ್ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ನಮಿತ್ ನೇತೃತ್ವದ ವಿಷ್ಯುವಲ್ ಎಫೆಕ್ಟ್ (VFX) ಸಂಸ್ಥೆ DNEG ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ಸ್ ವಿಭಾಗದಲ್ಲಿ ಒಟ್ಟು 8 ಆಸ್ಕರ್ (ಅಕಾಡೆಮಿ ಪ್ರಶಸ್ತಿ) ಪ್ರಶಸ್ತಿಗಳನ್ನು ಗೆದ್ದಿದೆ. 'ರಾಮಾಯಣ' ಚಿತ್ರಕ್ಕೂ ಪ್ರಶಸ್ತಿ ಬರುವ ನಿರೀಕ್ಷೆಯಿದೆ. ಇಂತಾದೊಂದು ಸಂಸ್ಥೆ ಜೊತೆ ಕೈಜೋಡಿಸಿ ಹೃತಿಕ್ ತಮ್ಮ ಮಹತ್ವಾಕಾಂಕ್ಷೆಯ 'ಕ್ರಿಶ್- 4' ಸಿನಿಮಾ ತೆರೆಗೆ ತರಲು ಮುಂದಾಗಿರುವಂತೆ ಕಾಣ್ತಿದೆ. ಅದೇ ನಿಜವಾದರೆ ಆ ಸಿನಿಮಾ ಪ್ರೇಕ್ಷಕರ ಕಣ್ಣಿಗೆ ಹಬ್ಬವೇ ಸರಿ.