'ರಾಮಾಯಣ' ಸರಣಿ ಸಿನಿಮಾಗಳಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಹಾಗೂ ರಾವಣನಾಗಿ ಯಶ್ ಅಬ್ಬರಿಸಿದ್ದಾರೆ. ನಿತೇಶ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.

ಪ್ರೀಮಿಯರ್ ಶೋ ವೇಳೆ ಚಿತ್ರತಂಡ ಅಲ್ಲಿನ ಮಾಧ್ಯಮಗಳ ಜೊತೆ ಮಾತನಾಡಿದೆ. ಯಶ್ ಕನ್ನಡ ಬೇರುಗಳ ಬಗ್ಗೆ ಮಾತನಾಡಿದ್ದು ಎಲ್ಲರ ಗಮನ ಸೆಳೆದಿದೆ. ಇನ್ನು ಸಾಯಿ ಪಲ್ಲವಿ ರಾವಣನ ಬಗ್ಗೆ ಆಡಿರುವ ಮಾತುಗಳು ವೈರಲ್ ಆಗಿ ಚರ್ಚೆ ಹುಟ್ಟಾಕ್ಕಿದೆ. ರಾವಣ ಸಂಪೂರ್ಣವಾಗಿ ಕೆಟ್ಟವನಲ್ಲ ಎಂದು ಆಕೆ ಹೇಳಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಟೀಕೆ ಎದುರಾಗುತ್ತಿದೆ. ಸಾಕಷ್ಟು ಜನ ಆಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಮಾಧ್ಯಮವೊಂದಕ್ಕೆ ಸಾಯಿಪಲ್ಲವಿ ಪ್ರತಿಕ್ರಿಯೆ ನೀಡಿ

ಭಾರತೀಯ ಸಂಸ್ಕೃತಿ ಹಾಗೂ ರಾಮಾಯಣದ ವಿಶಿಷ್ಟತೆಯ ಬಗ್ಗೆ ಹೇಳಿದ್ದಾರೆ. ಭಾರತೀಯ ಸಂಸ್ಕೃತಿ ಹಾಗೂ ಇತಿಹಾಸ ಅರ್ಥಮಾಡಿಕೊಳ್ಳಲು ಈ ಚಿತ್ರ ಒಳ್ಳೆ ಆರಂಭ. ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ. ರಾಮಾಯಣ ಒಂದು ಗ್ರಂಥ ಎಂದು ನಂಬುವುದಲ್ಲದೇ, ನಿಮ್ಮಲ್ಲಿರುವ ಸರಿ-ತಪ್ಪುಗಳ ಆತ್ಮಾವಲೋಕನ ಮಾಡಿಕೊಳ್ಳುವಂಥದ್ದು. "ರಾವಣ ಸಂಪೂರ್ಣವಾಗಿ ಕೆಟ್ಟವನಲ್ಲ"(Ravana is not all bad).. ನಾವು ನಮ್ಮೊಳಗೆ ಇರುವ ರಾವಣನನ್ನು ಕಂಡುಕೊಂಡು ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಾಯಿಪಲ್ಲವಿ ಅಭಿಪ್ರಾಯಪಟ್ಟಿದ್ದಾರೆ.

ಸಾಯಿಪಲ್ಲವಿ ಹೇಳಿಕೆಯನ್ನು ಕೆಲವರು ವಿರೋಧಿಸಿ ಕಾಮೆಂಟ್ ಮಾಡ್ತಿದ್ದಾರೆ. ಸೀತೆಯನ್ನು ಅಪಹರಿಸಿದ ರಾವಣ ಹೇಗೆ ಒಳ್ಳೆಯವನಾಗುತ್ತಾನೆ ? ರಾವಣ ಕೆಟ್ಟವನು. ಆದ್ರೆ ಅವನಲ್ಲಿ ಕೆಲ ಒಳ್ಳೆ ಗುಣಗಳಿದ್ದವು ಅಷ್ಟೆ. ಅವನು ಒಳ್ಳೆಯವನು ಕಂಡಿತ ಅಲ್ಲ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಹೇಳಿದ್ದರಲ್ಲಿ ತಪ್ಪೇನಿಲ್ಲ. ರಾವಣನನ್ನು ದೇಶದ ಕೆಲವು ಭಾಗಗಳಲ್ಲಿ ಪೂಜಿಸುತ್ತಾರೆ. ದೇವರ ಸ್ಥಾನ ಕೊಟ್ಟಿದ್ದಾರೆ. ಸುಖಾಸುಮ್ಮನೆ ಸಾಯಿಪಲ್ಲವಿ ಹೇಳಿಕೆಯಲ್ಲಿ ತಪ್ಪು ಹುಡುಕಬೇಡಿ ಎಂದು ಕೆಲವರು ಆಕೆಯ ಬೆನ್ನಿಗೆ ನಿಂತಿದ್ದಾರೆ.