ಎಷ್ಟೇ ಸಿನಿಮಾಗಳು ಸೋತ್ರು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಮಾತ್ರ ಸುಮ್ಮನಾಗ್ತಿಲ್ಲ. ಹೊಸ ಹೊಸ ಸಿನಿಮಾ ಘೋಷಣೆ ಮಾಡುತ್ತಲೇ ಇದೆ. ಭಿನ್ನ ವಿಭಿನ್ನ ಕಾಂಬಿನೇಷನ್ ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. ಹಲವು ಸಿನಿಮಾಗಳನ್ನು ವಿತರಣೆ ಮಾಡುತ್ತಲೇ ಬರ್ತಿದೆ. 'ಕೆಡಿ', 'ಜನನಾಯಗನ್', 'ಟಾಕ್ಸಿಕ್', 'ಹೈವಾನ್' ರೀತಿಯ ದೊಡ್ಡ ಸಿನಿಮಾಗಳು ನಿರಾಸೆ ಅನುಭವಿಸಿದ್ರು ಹೊಸ ಸಿನಿಮಾಗಳನ್ನು ಸಂಸ್ಥೆ ನಿರ್ಮಿಸಲು ಮುಂದಾಗ್ತಿದೆ. ಆ ಸಾಲಿಗೆ ಹೊಸ ಸೇರ್ಪಡೆ 'ಮಂಗಳ ಗೌರಿ'.

ಹೆಸರಿಗೆ ತಕ್ಕಂತೆ ಇದು ಮಹಿಳಾ ಪ್ರಧಾನ ಸಿನಿಮಾ. ಕನಸಿನ ರಾಣಿ ಮಾಲಾಶ್ರೀ ಹಾಗೂ ರುಕ್ಮಿಣಿ ವಸಂತ್ ಅಕ್ಕ- ತಂಗಿಯಾಗಿ ನಟಿಸುತ್ತಿರುವ ಸಿನಿಮಾ. ರಾಹುಲ್ ಪಿ. ಕೆ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕೆವಿಎನ್ ಸಂಸ್ಥೆ ಜೊತೆಗೆ ನಿರ್ದೇಶಕ ಹೇಮಂತ್ ರಾವ್ ಇದೀಗ 'ಮಂಗಳ ಗೌರಿ' ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಮಿಧುನ್ ಮುಕುಂದನ್ ಸಂಗೀತ, 'ತುಳಸಿ' ಮ್ಯೂಸಿಕ್ ವಿಡಿಯೋ ಖ್ಯಾತಿಯ ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ಇರಲಿದೆ. ಖ್ಯಾತ ಸಾಹಸ ನಿರ್ದೇಶಕ ವಿಕ್ರಮ್ ಮೋರ್ ಆ್ಯಕ್ಷನ್ ಸನ್ನಿವೇಶಗಳನ್ನು ಸಂಯೋಜನೆ ಮಾಡುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.

ರುಕ್ಮಿಣಿ ವಸಂತ್ ಪೊಲೀಸ್ ಕಾನ್ಸ್‌ಸ್ಟೇಬಲ್ ಪಾತ್ರದಲ್ಲಿ ನಟಿಸಿದ್ದಾರೆ. ಈವರೆಗೆ ನಾಯಕಿಯಾಗಿ ನಟ ಜೊತೆಗೆ ಡ್ಯುಯೆಟ್ ಹಾಡುವಂತಹ ಪಾತ್ರಗಳೇ ಆಕೆಗೆ ಹೆಚ್ಚು ಸಿಕ್ಕಿತ್ತು. 'ಕಾಂತಾರ- 1' ಚಿತ್ರದಲ್ಲಿ ಮಾತ್ರ ಪವರ್‌ಫುಲ್ ಪಾತ್ರದಲ್ಲಿ ಸೈ ಅನ್ನಿಸಿಕೊಂಡಿದ್ದರು. ಅಂಥದ್ದೇ ಮತ್ತೊಂದು ಪಾತ್ರ ಈ ಚಿತ್ರದಲ್ಲಿ ಸಿಕ್ಕಿರುವಂತೆ ಕಾಣ್ತದೆ. ಲಕ್ನೋ ಹಿನ್ನೆಲೆಯಲ್ಲಿ 'ಮಂಗಳ ಗೌರಿ' ಸಿನಿಮಾ ಕಥೆ ಸಾಗಲಿದೆ. ಮಂಗಳಾ ಆಗಿ ಮಾಲಾಶ್ರೀ ಹಾಗೂ ಸಹೋದರಿ ಗೌರಿ ಆಗಿ ರುಕ್ಮಿಣಿ ವಸಂತ್ ನಟಿಸುತ್ತಿರುವಂತೆ ಕಾಣ್ತಿದೆ.

ಚಿತ್ರರಂಗದ ಎರಡು ತಲೆಮಾರಿನ ಖ್ಯಾತ ನಟಿಯರನ್ನು ಒಂದೇ ಫ್ರೇಮ್‌ನಲ್ಲಿ ಒಗ್ಗೂಡಿಸಿರುವ ಸಿನಿಮಾ ಇದಾಗಿದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯೇ 'ಮಂಗಳಾ ಗೌರಿ' ಸಿನಿಮಾ ವಿತರಣೆ ಮಾಡಲಿದೆ. ಇತ್ತೀಚೆಗೆ ಮಾಲಾಶ್ರೀ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಆಕೆ ಬಣ್ಣ ಹಚ್ಚಿರುವುದು ವಿಶೇಷ. ಇಬ್ಬರು ಸಾಮಾನ್ಯ ಮಹಿಳೆಯ ಅಸಾಮಾನ್ಯ ಪಯಣ ಎಂದು ಚಿತ್ರವನ್ನು ಘೋಷಣೆ ಮಾಡಿದ್ದಾರೆ.