'ಕಾಂತಾರ' ಸರಣಿ ಸಿನಿಮಾಗಳ ಬಳಿಕ ರಿಷಬ್ ಶೆಟ್ಟಿ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದ್ಕಡೆ 'ಜೈಹನುಮಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ತಮ್ಮದೇ ನಿರ್ಮಾಣದಲ್ಲಿ ಹೊಸ ಹೊಸ ಸಿನಿಮಾ ಆರಂಭಿಸುತ್ತಿದ್ದಾರೆ. ಇದೀಗ ಛತ್ರಪತಿ ಶಿವಾಜಿ ಬಯೋಪಿಕ್ ಹೊಸ ಅಪ್‌ಡೇಟ್ ಬಂದಿದೆ.

ಎರಡು ಭಾಗಗಳಾಗಿ ಶಿವಾಜಿ ಬಯೋಪಿಕ್ ಸಿನಿಮಾ ಮೂಡಿ ಬರಲಿದೆ. ಮುಂದಿನ ವರ್ಷವೇ ಚಿತ್ರೀಕರಣ ಆರಂಭವಾಗಲಿದೆ ಎಂದು ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ. 'ದಿ ಪ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜಿ ಮಹಾರಾಜ್' ಹೆಸರಿನಲ್ಲಿ ಸಿನಿಮಾ ತೆರೆಗೆ ಬರಲಿದೆ. ಟಿ-ಸಿರೀಸ್ ಸಂಸ್ಥೆ ಜೊತೆಗೆ ರಿಷಬ್ ಶೆಟ್ಟಿ ಕೈಜೋಡಿಸಿದ್ದಾರೆ. ಸಂದೀಪ್ ಸಿಂಗ್ ಆಕ್ಷನ್ ಕಟ್ ಹೇಳಲಿದ್ದಾರೆ.

ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸೋ ಬಗ್ಗೆ ಕನ್ನಡಗರಿಂದ ಟೀಕೆ ವ್ಯಕ್ತವಾಗಿತ್ತು. ಅದನ್ನೆಲ್ಲಾ ಮೀರಿ ಸಿನಿಮಾ ನಿರ್ಮಾಣದ ಕೆಲಸಗಳು ಆರಂಭವಾಗಿದೆ. ಟೀ-ಸೀರಿಸ್‌ನ ಭೂಷಣ್ ಕುಮಾರ್ ಜೊತೆ ರಿಷಬ್ ಹಾಗೂ ಸಂದೀಪ್ ಕೂಡ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. "ಸ್ವರಾಜ್ಯ ಕೇವಲ ಒಂದು ಕನಸಾಗಿರಲಿಲ್ಲ. ಅದು ಇತಿಹಾಸವನ್ನೇ ರೂಪಿಸಿದ ಒಂದು ದಿವ್ಯ ದೃಷ್ಟಿಯಾಗಿತ್ತು" ಎಂದು ಚಿತ್ರತಂಡ ಹೇಳಿದೆ.

ಛತ್ರಪತಿ ಶಿವಾಜಿ ಮಹಾರಾಜರ ಅಸಾಧಾರಣ ಪರಂಪರೆಗೆ ಸಲ್ಲಿಸುವಂತಹ ಚಿತ್ರದ ಭಾಗವಾಗುವುದು ನಮಗೆ ಹೆಮ್ಮೆಯ ವಿಷಯವಾಗಿದೆ. 'ದಿ ಪ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜಿ ಮಹಾರಾಜ್' ಎಂಬ ಬೃಹತ್ ಐತಿಹಾಸಿಕ ಮಹಾಕಾವ್ಯಕ್ಕಾಗಿ ಟಿ-ಸೀರೀಸ್, ರಿಷಬ್ ಶೆಟ್ಟಿ ಹಾಗೂ ಸಂದೀಪ್ ಸಿಂಗ್ ಅವರೊಂದಿಗೆ ಕೈಜೋಡಿಸಿದೆ. ಈ ಕಥಾನಕವು ಎರಡು ಭಾಗಗಳಲ್ಲಿ ಮೂಡಿಬರಲಿದೆ. ರಿಷಬ್ ಶೆಟ್ಟಿ ನಟಿಸುತ್ತಿರುವ, ಸಂದೀಪ್ ಸಿಂಗ್ ನಿರ್ದೇಶಿಸುತ್ತಿರುವ ಮತ್ತು ಭೂಷಣ್ ಕುಮಾರ್ ನಿರ್ಮಿಸುತ್ತಿರುವ ಈ ಮಹತ್ವಾಕಾಂಕ್ಷೆಯ ಚಿತ್ರದ ಚಿತ್ರೀಕರಣವು 2027ರ ಆರಂಭದಲ್ಲಿ ಪ್ರಾರಂಭವಾಗಲಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.