ರೇಣುಕಾಸ್ವಾಮಿ ಪ್ರಕರಣದಲ್ಲಿ ಮಾಫಿ ಸಾಕ್ಷಿ ಹೇಳಿಕೆಯನ್ನು 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿ ಎದುರು ಹಾಜರಾಗಿ ಪ್ರದೋಷ್ ಸಂಪೂರ್ಣ ಘಟನೆಯ ಕುರಿತು ತಮ್ಮ ಹೇಳಿಕೆ ದಾಖಲಿಸಲಿದ್ದಾರೆ. ಇನ್ನು ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ತಡೆಕೋರಿ ದರ್ಶನ್ ಪರ ವಕೀಲಕರು ಸಲ್ಲಿಸಿದ್ದ ಮೆಮೋ ಕೂಡ ವಜಾ ಆಗಿತ್ತು.
ಇಂದು(ಸೆಪ್ಟೆಂಬರ್ 28) 59ನೇ ಸಿಸಿಹೆಚ್ ಕೋರ್ಟ್ ಕಟಕಟೆಯಲ್ಲಿ ನಿಂತು ಸತ್ಯವನ್ನು ಮಾತ್ರ ಹೇಳ್ತೀನಿ ಎಂದು ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಮಾಫಿ ಸಾಕ್ಷಿ ಪ್ರದೋಷ್ ತಮ್ಮ ಹೇಳಿಕೆ ಆರಂಭಿಸಿದ್ದರು. ಪ್ರದೋಷ್ ಸುಬ್ಬರಾವ್ ಆದ ನಾನು ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಹಾಗೂ ಪವಿತ್ರಾ ಗೌಡ ಕೂಡ ವಿಚಾರಣೆಗೆ ಹಾಜರಾಗಿದ್ದರು. ನನ್ನ ಹೇಳಿಕೆ ವೇಳೆ ಕೆಲ ಅಸಭ್ಯ ಪದಗಳು ಬರುತ್ತವೆ ಕ್ಷಮಿಸಬೇಕು ಎಂದು ನ್ಯಾಯಾಧೀಶರಿಗೆ ಹೇಳಿ ಪ್ರದೋಷ್ ಹೇಳಿಕೆ ದಾಖಲಿಸಲು ಆರಂಭಿಸಿದರು.
ಪ್ರದೋಷ್ ಹೇಳಿಕೆ ದಾಖಲಿಸುವ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ ಉಳಿದವರು ಕೋರ್ಟ್ ಹಾಲ್‌ನಿಂದ ಹೊರಗಡೆ ಹೋಗಬೇಕು ಎಂದು ನ್ಯಾಯಾಧೀಶರು ತಿಳಿಸಿದ್ದರು. ವಿಚಾರಣೆ ಇನ್-ಕ್ಯಾಮರಾ ಪ್ರೊಸೀಡಿಂಗ್ಸ್ ಮೂಲಕ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಪ್ರದೋಷ್ ಲಿಖಿತ ರೂಪದಲ್ಲಿ ದಾಖಲಿಸಿದ್ದ ಹೇಳಿಕೆಯನ್ನು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಬಿಚ್ಚಿಟ್ಟರು. ಪ್ರಕರಣದಲ್ಲಿ ಎ14 ಆರೋಪಿ ಆಗಿರುವ ಪ್ರದೋಷ್ ಈಗ 29ನೇ ಸಾಕ್ಷಿಯಾಗಿ ಹೇಳಿಕೆ ಕೊಟ್ಟಿದ್ದಾರೆ.
ದರ್ಶನ್ ಜೊತೆಗಿನ ಪರಿಚಯ, ಸ್ನೇಹ ಎಲ್ಲದರ ಬಗ್ಗೆ ಪ್ರದೋಷ್ ನ್ಯಾಯಾಲಯದಲ್ಲಿ ಹೇಳಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಪಟ್ಟಣಗೆರೆ ಶೆಡ್‌ನಲ್ಲಿ ಏನೆಲ್ಲಾ ಆಯ್ತು. ತಾನು ಆ ಸ್ಥಳಕ್ಕೆ ಹೋಗಿದ್ದು ಯಾವಾಗ ? ಬಳಿಕ ಏನೆಲ್ಲಾ ಆಯ್ತು ಎನ್ನುವುದನ್ನು ಪ್ರದೋಷ್ ತಿಳಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ನೀಡಿದ್ದ ಹೇಳಿಕೆ, ಬಳಿಕ ಇತ್ತೀಚೆಗೆ ಮಾಫಿ ಸಾಕ್ಷಿಯಾಗಿ ಅರ್ಜಿ ಸಲ್ಲಿಸಿದ್ದ ಪ್ರದೋಷ್ ಅದರಲ್ಲಿ ಪ್ರಸ್ತಾಪಿಸಿದ್ದ ಎಲ್ಲಾ ವಿಚಾರಗಳನ್ನು ನ್ಯಾಯಾಲಯದ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾಳೆ(ಸೆಪ್ಟೆಂಬರ್ 29)ಗೆ ಪ್ರದೋಷ್ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.