ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳ ಜೈಲು ವಾಸ ಮುಂದುವರೆದಿದೆ. ಜಾಮೀನು ಪಡೆಯಲು ನಡೆಸುತ್ತಿರುವ ಪ್ರಯತ್ನಗಳು ವ್ಯರ್ಥವಾಗ್ತಿದೆ. ಎ1 ಪವಿತ್ರಾ ಗೌಡ ನನಗೆ ಜೈಲಿನಲ್ಲಿ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಇಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಒಂದು ತೊಟ್ಟು ವಿಷ ಕೊಟ್ಟುಬಿಡಿ ಎಂದು ತಮ್ಮ ವಕೀಲರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ವೇಳೆ ಅವರ ಪರ ವಕೀಲರು ಈ ವಿಚಾರವನ್ನು ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಈ ಹಿಂದೆ ಕೂಡ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಎದುರಾಗುತ್ತಿರುವ ಸಂಕಷ್ಟದ ಬಗ್ಗೆ ಪವಿತ್ರಾ ಗೌಡ ನೋವು ತೋಡಿಕೊಂಡಿದ್ದರು. ನೈಜೀರಿಯಾ ಮೂಲದ ಆರೋಪಿಗಳು ತಮ್ಮ ಬ್ಯಾರಕ್‌ನಲ್ಲಿದ್ದಾರೆ. ಅವರು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಕೆ ಹೇಳಿರುವುದಾಗ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ವಕೀಲರು ಆಕೆಯ ಭೇಟಿಗೆ ಹೋದಾಗ ಒಂದು ತೊಟ್ಟು ವಿಷ ಕೊಟ್ಟುಬಿಡಿ ಎಂದು ಬಿಕ್ಕಿ ಬಿಕ್ಕಿ ಅತ್ತರು ಎಂದು ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಕೂಡ ಪವಿತ್ರಾ ಗೌಡ ಈ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಜೈಲು ಸಿಬ್ಬಂದಿ ಕೂಡ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಪವಿತ್ರಾ ಗೌಡ ಹೇಳಿರುವುದಾಗಿ ವಕೀಲರು ಹೇಳಿದ್ದಾರೆ. ಪವಿತ್ರಾ ಗೌಡ ಪರ ವಕೀಲರು ವಾದ ಮಾಡಿ ನಮ್ಮ ಕಕ್ಷಿದಾರರು ಮಗಳನ್ನು ಹಾಗೂ ವಯಸ್ಸಾದ ತಾಯಿಯ ಆರೈಕೆ ಮಾಡಬೇಕಿದೆ. ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಜಾಮೀನು ನೀಡಿದರೆ ಸಾಕ್ಷ್ಯನಾಶದಲ್ಲಿ ಭಾಗಿಯಾಗಲ್ಲ, ಪ್ರಕರಣದ ವಿಚಾರಣೆ ಪದೇ ಪದೆ ತಡವಾಗ್ತಿದೆ. ಸುಪ್ರೀಂ ಕೋರ್ಟ್ ಹಾಕಿರುವ ಒಂದು ವರ್ಷದ ಜಾಮೀನು ನಿರ್ಬಂಧ ಪವಿತ್ರಾ ಗೌಡಗೆ ಅನ್ವಯಿಸಲ್ಲ ಎಂದು ತಿಳಿಸಿದ್ದಾರೆ.
ಪೊಲೀಸರ ಪರವಾಗಿ ಎಸ್‌ಪಿಪಿ ಪ್ರಸನ್ನಕುಮಾರ್ "ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಹೇಳಿದೆ. ಸಾಕ್ಷಿಗಳ ವಿಚಾರಣೆ ಮುಗಿಯದ ಹೊರತು ಯಾರಿಗೂ ಜಾಮೀನು ನೀಡುವಂತಿಲ್ಲ. ಇದು ಪ್ರಕರಣದ ಎಲ್ಲಾ ಆರೋಪಿಗಳಿಗೂ ಅನ್ವಯವಾಗುತ್ತದೆ" ಎಂದಿದ್ದಾರೆ.