ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳಿಗೆ ಸಂಕಷ್ಟ ಮುಂದುವರೆದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿದ್ದ ಆರೋಪಿಗಳಿಗೆ ಪದೇ ಪದೆ ಹಿನ್ನಡೆ ಆಗ್ತಿದೆ. ನಾನಾ ವಿಚಾರಗಳಿಗೆ ಮನವಿ ಮಾಡಿ ಕೋರ್ಟ್‌ಗಳಲ್ಲಿ ಅರ್ಜಿ ಹಾಕಿಕೊಂಡ್ರು ಪ್ರಯೋಜನವಾಗುತ್ತಿರಲಿಲ್ಲ. ಆದರೆ ಎ1 ಆರೋಪಿ ಪವಿತ್ರಾ ಗೌಡಗೆ ಈಗ ಸಣ್ಣ ರಿಲೀಫ್ ಸಿಕ್ಕಿದೆ.
ಅನಾರೋಗ್ಯದ ನೆಪವೊಡ್ಡಿ ಪವಿತ್ರಾ ಗೌಡ ಜೈಲಿನಲ್ಲಿ ಬ್ಯಾರಕ್ ಬದಲಾವಣೆಗೆ ಮನವಿ ಮಾಡಿದ್ದರು. ಈ ಸಂಬಂಧ 59ನೇ ಸಿಸಿಹೆಚ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜೈಲು ನಿಯಮಾವಳಿಗಳು ಹಾಗೂ ಕೈಪಿಡಿ ತಕ್ಕಂತೆ ಕ್ರಮ ಕೈಗೊಂಡು ಬ್ಯಾರಕ್ ಬದಲಾವಣೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಆದೇಶ ನೀಡಿದೆ.
20 ಕೈದಿಗಳಿರಬಹುದಾದ ಜಾಗದಲ್ಲಿ 30 ಮಂದಿ ಕೈದಿಗಳನ್ನು ಉಳಿಸಿದ್ದಾರೆ. ರಾತ್ರಿ ನಿದ್ರೆ ಸರಿಯಾಗಿ ಮಾಡಲು ಸಾಧ್ಯವಾಗದೇ ಅರ್ಧ ತಲೆನೋವು ಶುರುವಾಗಿದೆ. ಅಷ್ಟು ಜನಕ್ಕೆ ಒಂದೇ ಟಾಯ್ಲೆಟ್ ಇದೆ. ಇದರಿಂದ ಅಲರ್ಜಿಯಾಗಿ ಮೂತ್ರಕೋಶ ಸಂಬಂಧಿ ಕಾಯಿಲೆ, ತೀವ್ರ ಜ್ವರ ಬಂದಿದೆ. ಆಕೆ ಮಾನಸಿಕ ಒತ್ತಡ, ಉದ್ವೇಗಕ್ಕೆ ಒಳಗಾಗಿದ್ದಾರೆ, ಅಲ್ಲ ನೈಜೀರಿಯನ್ ಕೈದಿಗಳು ಪವಿತ್ರಾ ಗೌಡ ಅವರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ, ಹಾಗಾಗಿ ಬೇರೆ ಬ್ಯಾರಕ್ ವ್ಯವಸ್ಥೆ ಮಾಡಿ ಎಂದು ವಕೀಲರು ಅರ್ಜಿಯಲ್ಲಿ ತಿಳಿಸಿದ್ದರು.
ದರ್ಶನ್ ರಿಟ್ ಅರ್ಜಿ
ಇತ್ತ ಎ2 ಆರೋಪಿ ದರ್ಶನ್ ವಿಚಾರಣೆ ವೇಳೆ ಕೋರ್ಟ್‌ಗೆ ಖುದ್ದು ಹಾಜರಾಗಲು ಅನುಮತಿ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಹಾಗೂ ಕೋರ್ಟ್‌ನಲ್ಲಿ ಸೂಕ್ತ ತಾಂತ್ರಿಕ ಉಪಕರಣಗಳಿಲ್ಲ, ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಪದೇ ಪದೆ ತಾಂತ್ರಿಕ ಅಡಚಣೆಗಳು ಎದುರಾಗುತ್ತಿದೆ. ತಮ್ಮ ವಕೀಲರೊಂದಿಗೆ ನೇರ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಿಡಿಯೋ ಕಾನ್ಫರೆನ್ಸ್ ಬೇಡ, ಬದಲಾಗಿ ಖುದ್ದಾಗಿ ಕೋರ್ಟ್‌ನಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕು ಮನವಿ ಮಾಡಿದ್ದಾರೆ.
ಕೋರ್ಟ್ ವಿಚಾರಣೆಯನ್ನು ಖುದ್ದಾಗಿ ಆಲಿಸುವುದು, ವೀಕ್ಷಿಸುವುದು ತಮ್ಮ ಹಕ್ಕು. ಸಾಕ್ಷಿ ಕೂಡ ಆರೋಪಿಯ ಎದುರಲ್ಲೇ ತನ್ನ ಹೇಳಿಕೆ ನೀಡಬೇಕು ಹಾಗೂ ವಿಚಾರಣೆ ವೇಳೆ ವಕೀಲರಿಗೆ ಸೂಕ್ತ ಸೂಚನೆಗಳನ್ನು ನೀಡಲು ತಮಗೆ ಅವಕಾಶ ಇರಬೇಕು ಎಂದು ಅರ್ಜಿಯಲ್ಲಿ ದರ್ಶನ್ ಅವರು ತಿಳಿಸಿದ್ದಾರೆ. ಶೀಘ್ರದಲ್ಲೇ ಈ ಅರ್ಜಿ ವಿಚಾರಣೆ ನಡೆಯಲಿದೆ.