ರೇಣುಕಾಸ್ವಾಮಿ ಪ್ರಕರಣದಲ್ಲಿ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ನಿನ್ನೆ(ಸೆಪ್ಟೆಂಬರ್ 28) 3 ಗಂಟೆಗಳ ಕಾಲ ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ನಡೀತು. ಇವತ್ತು(ಸೆಪ್ಟೆಂಬರ್ 29) ಕೂಡ ಅದು ಮುಂದುವರೆಯಲಿದೆ. ಈಗಾಗಲೇ ಪ್ರಕರಣ ಸಂಬಂಧ ಸಾಕಷ್ಟು ವಿಚಾರವನ್ನು ಪ್ರದೋಷ್ ನ್ಯಾಯಾಲಯದ ಮುಂದೆ ಹೇಳಿದ್ದಾನೆ. ಪಟ್ಟಣಗೆರೆ ಶೆಡ್‌ನಲ್ಲಿ ಅಂದು ನಡೆದ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದಾನೆ.
ಪ್ರಕರಣದ 14ನೇ ಆರೋಪಿ ಆಗಿರುವ ಪ್ರದೋಷ್ ಈಗ 29ನೇ ಸಾಕ್ಷಿಯಾಗಿದ್ದಾನೆ. ದರ್ಶನ್ ಪರಿಚಯ, ಸ್ನೇಹ ಹೀಗೆ ಎಲ್ಲಾ ವಿಚಾರಗಳನ್ನು ಎಳೆಎಳೆಯಾಗಿ ಪ್ರದೋಷ್ ಹೇಳಿದ್ದಾನೆ. ಮೊದಲಿಗೆ ಸ್ಟೋನಿ ಬ್ರೋಕ್ ರೆಸ್ಟೊರೆಂಟ್‌ಗೆ ಹೋಗಿ ಪಾರ್ಟಿ ಮಾಡಿದ್ದು ಬಳಿಕ ಪವಿತ್ರಾ ಗೌಡ ಮನೆಯಿಂದ ಆಕೆಯನ್ನು ಪಟ್ಟಣಗೆರೆ ಶೆಡ್‌ಗೆ ಕರ್ಕೊಂಡ್ ಹೋಗಿದ್ದು ಎಲ್ಲವನ್ನು ವಿವರಿಸಿದ್ದಾನೆ. ಅಶ್ಲೀಲ ಪದಗಳಿಂದ ರೇಣುಕಾಸ್ವಾಮಿಯನ್ನು ನಿಂದಿಸಿ ಹಲ್ಲೆ ಮಾಡಿದ್ದು ಹೀಗೆ ಎಲ್ಲಾ ಸಂಗತಿಯನ್ನು ಪ್ರದೋಷ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಪ್ರದೋಷ್ ಹೇಳಿಕೆ ದಾಖಲಿಸಿಕೊಳ್ಳಲಾಗ್ತಿದೆ. ಇನ್‌ಕ್ಯಾಮರಾ ಪ್ರೊಸಿಡಿಂಗ್ಸ್‌ನಲ್ಲಿ ಹೇಳಿಕೆ ಪಡೆಯಲಾಗ್ತಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಆರು ಮಂದಿ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರದೋಷ್ ಸಾಕ್ಷಿ ಹೇಳಿಕೆ ನೀಡುತ್ತಿರುವುದನ್ನು ಕೇಳಿ ಪವಿತ್ರಾ ಗೌಡ ಭಾವುಕರಾಗಿದ್ದಾರೆ. ದರ್ಶನ್ ತಲೆ ಮೇಲೆ ಕೈಹೊತ್ತು ಕೂತಿದ್ದರು ಎಂದು ಹೇಳಲಾಗ್ತಿದೆ. ಅವತ್ತು ಪಟ್ಟಣಗೆರೆ ಶೆಡ್‌ಗೆ ಯಾರೆಲ್ಲಾ ಹೋಗಿದ್ರು, ಏನೆಲ್ಲಾ ಆಯ್ತು, ರೇಣುಕಾಸ್ವಾಮಿ ಮೃತಪಟ್ಟ ಬಳಿಕ ಶವಸಾಗಾಟ ಹಾಗೂ ಸುಪಾರಿಗೆ ಹೇಗೆ ವ್ಯವಸ್ಥೆ ಮಾಡಿದ್ರು ಎನ್ನುವುದನ್ನು ಪ್ರದೋಷ್ ಹೇಳಿದ್ದಾನೆ.
ಪ್ರದೋಷ್ ಹೇಳಿಕೆ ಈಗ ದರ್ಶನ್ ಅಂಡ್ ಗ್ಯಾಂಗ್‌ಗೆ ನುಂಗಲಾರದ ತುತ್ತಾಗಿದೆ. ಹೇಗಾದರೂ ಮಾಡಿ ಪ್ರದೋಷ್ ಸಾಕ್ಷಿ ಹೇಳಿಕೆಯನ್ನು ತಡೆಯಲು ದರ್ಶನ್ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿತ್ತು. ಒಟ್ಟಾರೆ ಪ್ರಕರಣದಲ್ಲಿ ಪ್ರದೋಷ್ ಹೇಳಿಕೆ ಮಹತ್ವದ ತಿರುವು ಕೊಡಲಿದೆ.