ರೇಣುಕಾಸ್ವಾಮಿ ಪ್ರಕರಣದಲ್ಲಿ ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಕೂಡ ಸಾಕ್ಷಿಗಳಾಗಿದ್ದಾರೆ. ಅಂದು(ಜೂನ್ 8, 2024) ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಪಟ್ಟಣೆಗೆರೆ ಶೆಡ್‌ಗೆ ಅಪಹರಣ ಮಾಡಿ ಕರೆತರಲಾಗಿತ್ತು. ಅಂದು ಆರ್‌ಆರ್‌ ನಗರದ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿ ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗಿದ್ದರು. ಅಂದು ಪಾರ್ಟಿಯಲ್ಲಿ ಚಿಕ್ಕಣ್ಣ, ಯಶಸ್ ಭಾಗಿ ಆಗಿದ್ದರು.

ದರ್ಶನ್ ಜೊತೆ ಅಂದು ಪಾರ್ಟಿ ಮಾಡಿದ್ದ ಕಾರಣಕ್ಕೆ ಅವರಿಬ್ಬರನ್ನು ಪ್ರಕರಣದಲ್ಲಿ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಇಂದು(ಅಕ್ಟೋಬರ್ 13) ನಗರದ ಸಿಸಿಎಚ್ ಕೋರ್ಟ್‌ಗೆ ನೋಟಿಸ್ ನೀಡಿ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರನ್ನು ಕರೆಸಲಾಗಿತ್ತು. ಸಾಕ್ಷ್ಯ ನುಡಿಯುವ ವೇಳೆ ನಟ ಚಿಕ್ಕಣ್ಣ ತಡಬಡಾಯಿಸಿದ್ದಾರೆ ಎಂದು ವರದಿಯಾಗಿದೆ. ಕಟಕಟೆಯಲ್ಲಿ ನಿಂತು ಸಾಕ್ಷ್ಯ ಹೇಳುವಾಗ ಚಿಕ್ಕಣ್ಣ ಆತಂಕಗೊಂಡಿದ್ದರು. ಮಾತನಾಡಲು ಕಷ್ಟಪಟ್ಟಾಗ ನ್ಯಾಯಾಧೀಶರು ಕೊಂಚ ಸಮಯ ವಿಶ್ರಾಂತಿ ಪಡೆಯಲು ಸೂಚಿಸಿದ್ದರು.

ದರ್ಶನ್ ಹಾಗೂ ಪವಿತ್ರಾ ಗೌಡ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಅವರ ಎದುರಲ್ಲೇ ಅಂದು ನಡೆದ ಘಟನೆಗಳನ್ನು ಚಿಕ್ಕಣ್ಣ ಹಾಗೂ ಯಶಸ್ ಕೋರ್ಟ್‌ನಲ್ಲಿ ಹೇಳಿದ್ದಾರೆ. ದರ್ಶನ್ ಜೊತೆಗಿನ ಪರಿಚಯ, ಒಡನಾಟದ ಬಗ್ಗೆ ಹೇಳಿ ನಂತರ ಜೂನ್ 8, 2024ರಂದು ಪಾರ್ಟಿಯಲ್ಲಿ ಭಾಗಿ ಆಗಿದ್ದನ್ನು ವಿವರಿಸಿದ್ದಾರೆ.

ಅವತ್ತು ಪಾರ್ಟಿಯಲ್ಲಿ ಊಟ ಮಾಡಿ ಸಿನಿಮಾ ಬಗ್ಗೆ ಮಾತ್ರ ಚರ್ಚೆ ನಡೆಸಿದ್ದಾಗಿ ಯಶಸ್ ಕೋರ್ಟ್‌ನಲ್ಲಿ ತಿಳಿಸಿದ್ದಾರೆ. ಊಟ ಮಾಡಿಕೊಂಡು ಅಲ್ಲಿಂದ ಹೊರಟುಬಿಟ್ಟೆ ಎಂದು ಯಶಸ್ ಹೇಳಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆಯನ್ನು ಕೋರ್ಟ್‌ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಸಾಕ್ಷಿಗಳ ವಿಚಾರಣೆ ಮುಂದುವರೆಯುತ್ತಿದೆ. ಪ್ರಕರಣ ಯಾವ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.