ರವಿತೇಜಾ ನಟನೆಯ 'ಇರುಮುಡಿ' ಸಿನಿಮಾ ಥಿಯೇಟರ್ ಬಳಿಕ ಈ ಓಟಿಟಿಗೆ ಬಂದು ವೀಕ್ಷಕರನ್ನು ಸೆಳೆಯುತ್ತಿದೆ. ಆಗಸ್ಟ್ 21ಕ್ಕೆ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗಪ್ಪಳಿಸಿತ್ತು. ಅದರ ಬೆನ್ನಲ್ಲೇ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಕೂಡ ತೆರೆಗೆ ಬಂದಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದರ ಲಾಭ 'ಇರುಮುಡಿ' ಸಿಕ್ಕಿತ್ತು.

'ಟಾಕ್ಸಿಕ್' ಸುನಾಮಿಗೆ 'ಇರುಮುಡಿ' ಸಿನಿಮಾ ಕೊಚ್ಚಿಕೊಂಡು ಹೋಗುತ್ತೆ ಎಂದೇ ಕೆಲವರು ಭಾವಿಸಿದ್ದರು. ಆದರೆ ಎಲ್ಲಾ ಉಲ್ಟಾ ಆಗಿತ್ತು. 'ಟಾಕ್ಸಿಕ್' ಚಿತ್ರ ಪ್ರೇಕ್ಷಕರ ನಿರೀಕ್ಷೆ ತಲುಪದೇ ಇದ್ದಾಗ ಪ್ರೇಕ್ಷಕರು 'ಇರುಮುಡಿ' ಚಿತ್ರ ನೋಡಲು ಮುಗಿಬಿದ್ದರು. ಪರಿಣಾಮ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ರವಿತೇಜಾ ಸಿನಿಜೀವನದಲ್ಲೇ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ. ಹತ್ತು ವರ್ಷಗಳಿಂದ ಅವರು ಎದುರು ನೋಡ್ತಿದ್ದ ಬ್ರೇಕ್ ಸಿಕ್ಕಿದೆ.

ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ 'ಇರುಮುಡಿ' ಸ್ಟ್ರೀಮಿಂಗ್ ಆಗ್ತಿದೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಆದರೆ ಓಟಿಟಿಯಲ್ಲಿ ಸಿನಿಮಾ ನೋಡಿದವರು ಅಚ್ಚರಿಗೊಂಡಿದ್ದಾರೆ. ಅರೇ, ಆಹಾ ಓಹೋ ಅಂತ ಮೆರೆಸಿದ ಸಿನಿಮಾ ಏನು ಹಿಂಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಿಟ್ ಸಿನಿಮಾಗಳು ಓಟಿಟಿಗೆ ಬಂದು ನೆಗೆಟಿವ್ ಟಾಕ್ ಪಡೆದಿರುವ ಸಾಕಷ್ಟು ಉದಾಹರಣೆಗಳಿವೆ. ಅದೇ ರೀತಿ ಚಿತ್ರಮಂದಿರಗಳಲ್ಲಿ ಸೋತ ಸಿನಿಮಾಗಳು ಓಟಿಟಿಯಲ್ಲಿ ಒಳ್ಳೆ ಮೆಚ್ಚುಗೆ ಗಳಿಸಿರುವುದು ಇದೆ. ಸದ್ಯ 'ಇರುಮುಡಿ' ಸಿನಿಮಾ ಯಾಕೆ ಓಟಿಟಿಯಲ್ಲಿ ಇಷ್ಟವಾಗ್ತಿಲ್ಲ ಎನ್ನುವ ಚರ್ಚೆ ಶುರುವಾಗಿದೆ

ದೊಡ್ಡಪರದೆಯಲ್ಲಿ ಭಾರೀ ಸೌಂಡ್ ಜೊತೆ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ. ಅದೇ ಕಾರಣಕ್ಕೆ ಕೆಲ ಸಿನಿಮಾಗಳು ಆವರೇಜ್ ಆಗಿದ್ದರೂ ಹಿಟ್ ಆಗಿ ಬಿಡುತ್ತವೆ. ಮುಖ್ಯವಾಗಿ 'ಇರುಮುಡಿ' ಚಿತ್ರಕ್ಕೆ ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಪ್ಲಸ್ ಆಗಿತ್ತು. ಅದೆಲ್ಲವೂ ಚಿತ್ರಮಂದಿರಗಳಲ್ಲಿ ಒಳ್ಳೆ ಅನುಭವ ನೀಡಿತ್ತು. ಕೆಲವೊಮ್ಮೆ ಜನ ಮರಳೋ ಜಾತ್ರೆ ಮರುಳೋ ಎನ್ನುವಂತೆ ಎಲ್ಲರೂ ಚೆನ್ನಾಗಿದೆ ಎಂದು ಹೇಳಿದಾಗ ಅದೇ ಮನಸ್ಥಿತಿಯಲ್ಲಿ ಸಿನಿಮಾ ನೋಡಲು ಹೋದಾಗ ಇಷ್ಟವಾಗಬಹುದು. ಅಥವಾ ಎಲ್ಲರೂ ಚೆನ್ನಾಗಿದೆ ಎನ್ನುತ್ತಿದ್ದಾರೆ, ಹಾಗಾಗಿ ನಾನು ಚೆನ್ನಾಗಿಲ್ಲ ಎಂದರೆ ಜನ ಒಪ್ತಾರಾ? ಎನ್ನುವ ಅಳುಕಿನಲ್ಲಿ ಜೈಕಾರ ಹಾಕಿ ಬರುವವರು ಇದ್ದಾರೆ. 'ಟಾಕ್ಸಿಕ್' ಚಿತ್ರದ ವಿಚಾರದಲ್ಲೂ ಇಂಥದ್ದೇ ಅಭಿಪ್ರಾಯ ಸೃಷ್ಟಿ ಆಗಿಬಿಡ್ತು ಎನ್ನುವವರು ಇದ್ದಾರೆ.

ಕೆಲ ಸಿನಿಮಾಗಳಿಗೆ ದೊಡ್ಡ ಪರದೆಗಿಂತ ಓಟಿಟಿಯೇ ಉತ್ತಮ ಎನಿಸುತ್ತದೆ. ಹಾಗಾಗಿ ಚಿತ್ರಮಂದಿರಗಳಲ್ಲಿ ನಿರಾಸೆ ಅನುಭವಿಸಿದ ಸಿನಿಮಾಗಳು ಓಟಿಟಿಯಲ್ಲಿ ಗೆದ್ದುಬಿಡುತ್ತವೆ. ಬಳಿಕ ಪ್ರೇಕ್ಷಕರು ಅಯ್ಯೋ ಇಂತಹ ಸಿನ್ಮಾ ಚಿತ್ರಮಂದಿರದಲ್ಲಿ ನೋಡುವ ಅವಕಾಶ ಮಿಸ್ ಮಾಡ್ಕೊಂಡೆ ಎಂದು ಬೇಸರ ಪಡುವುದು ಇದೆ. ಆದರೆ 'ಇರುಮುಡಿ' ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲಲು 'ಟಾಕ್ಸಿಕ್' ಕಾರಣ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.

'ಟಾಕ್ಸಿಕ್' ಇಂಪ್ಯಾಕ್ಟ್

ಆಗಸ್ಟ್ 21ರಂದು 'ಇರುಮುಡಿ' ಚಿತ್ರ ತೆರೆಕಂಡಿತ್ತು. ತೆಲುಗು ಮಾಧ್ಯಮಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಅಬ್ಬರದ ಪ್ರಚಾರ ನಡೀತು. ಅದೇ ಹೊತ್ತಲ್ಲಿ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದಿತ್ತು. ಕೆಲವರು ಬೇಕೆಂದೇ ಟಾರ್ಗೆಟ್ ಮಾಡಿದ್ರು, ಮೊದಲ ಶೋನಿಂದಲೇ ನೆಗೆಟಿವ್ ಹಬ್ಬಿಸಿದ್ರು. ಪೈರಸಿ ಮಾಡಿಬಿಟ್ರು.. ಅಯ್ಯೋ ಪೈರಸಿ ಕಾಪಿ ನೋಡಿದ್ರೆ ಆಯ್ತು, ಓಟಿಟಿಗೆ ಬದ್ಮೇಲೆ ನೋಡಿದ್ರೆ ಆಯ್ತು ಎಂದು ಹಿಂದೇಟು ಹಾಕಲು ಶುರು ಮಾಡಿದ್ದರು. ಪರ್ಯಾಯವಾಗಿ ಯಾವ ಸಿನಿಮಾ ನೋಡುವುದು ಎಂದಾಗ 'ಇರುಮುಡಿ' ಕಂಡಿತ್ತು. ಹಾಗಾಗಿ ಸಹಜವಾಗಿಯೇ ಜನ ಮುಗಿಬಿದ್ದು ಸಿನಿಮಾ ನೋಡಿದರು ಎನ್ನುವುದು ಕೆಲವರ ವಾದ. ಇನ್ನುಳಿದಂತೆ 200 ಕೋಟಿ ರೂ. ಕಲೆಕ್ಷನ್ ಮಾಡುವಂಥದ್ದು 'ಇರುಮುಡಿ' ಚಿತ್ರದಲ್ಲಿ ಏನು ಇಲ್ಲ ಎನ್ನುತ್ತಿದ್ದಾರೆ.