ಒಂದೇ ಒಂದು ಸಿನಿಮಾ ಕಲಾವಿದರ ನಸೀಬು ಬದಲಿಸಿರುವ ಸಾಕಷ್ಟು ಉದಾಹರಣೆಗಳಿವೆ. ಇನ್ನು ಸೋತು ಸುಣ್ಣವಾಗಿದ್ದವರು ಒಂದು ಗೆಲುವಿನಿಂದ ಫಿನಿಕ್ಸ್ ರೀತಿ ಎದ್ದು ಬಂದುಬಿಡ್ತಾರೆ. ತೆಲುಗಿನ 'ಇರುಮುಡಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಸದ್ದು ಮಾಡ್ತಿದೆ. ಚಿತ್ರದಿಂದ ನಟ ರವಿತೇಜಾ ಒಳ್ಳೆ ಲಾಭ ಗಳಿಸಿದ್ದಾರೆ. ಮುಂದಿನ ಚಿತ್ರಕ್ಕೂ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.

ಒಂದು ಸಿನಿಮಾ ಗೆಲ್ಲುತ್ತಿದ್ದಂತೆ ಕಲಾವಿದರು, ತಂತ್ರಜ್ಞರು ಸಂಭಾವನೆ ಹೆಚ್ಚಿಸಿಕೊಳ್ಳುವುದು ಹೊಸದೇನು ಅಲ್ಲ. ಒಂದ್ಕಾಲದಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದ ರವಿತೇಜಾ ಇತ್ತೀಚೆಗೆ ಸೈಲೆಂಟ್ ಆಗಿಬಿಟ್ಟಿದ್ದರು. ಅವರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿರಲಿಲ್ಲ. 'ಇರುಮುಡಿ' ಚಿತ್ರದ ಮೇಲೆ ಕೂಡ ಅಷ್ಟೇನು ನಿರೀಕ್ಷೆ ಇರಲಿಲ್ಲ. ಆದರೆ ಅನಿರೀಕ್ಷಿತ ಎನ್ನುವಂತೆ ಸಿನಿಮಾ ಗೆದ್ದಿದೆ. 250 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ.

ಇಂತಾದೊಂದು ಗೆಲುವನ್ನು ಸ್ವತಃ ರವಿತೇಜಾ ಊಹಿಸಿರಲಿಲ್ಲ. ಹಾಗಾಗಿ 'ಇರುಮುಡಿ' ಚಿತ್ರಕ್ಕೂ ಭಾರೀ ಸಂಭಾವನೆ ಪಡೆದಿರಲಿಲ್ಲ. 8ರಿಂದ 10 ಕೋಟಿ ರೂ. ಸಂಭಾವನೆ ಜೊತೆಗೆ ನೈಜಾಂ ಭಾಗದ ವಿತರಣೆ ಹಕ್ಕು ತಮ್ಮದಾಗಿಸಿಕೊಂಡಿದ್ದರು. ಸಿನಿಮಾ ಹಿಟ್ ಆಗಿ ಅಲ್ಲಿ 40 ಕೋಟಿ ರೂ. ಶೇರ್ ಬಂದಿದೆ ಎನ್ನಲಾಗ್ತಿದೆ. ಹಾಗಾಗಿ ಜಾಕ್‌ಪಾಟ್ ಹೊಡೆದುಬಿಟ್ಟಿದ್ದಾರೆ. ಸದ್ಯ ಇದೇ ಲೆಕ್ಕಾಚಾರವನ್ನು ಮುಂದಿನ ಸಿನಿಮಾಗಳಲ್ಲಿ ಮುಂದುವರೆಸಲು ರವಿತೇಜಾ ಮನಸ್ಸು ಮಾಡಿದ್ದಾರೆ.

ವಿವೇಕ್ ಆತ್ರೇಯ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ರವಿತೇಜಾ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಚಿತ್ರಕ್ಕಾಗಿ 20 ಕೋಟಿ ರೂ. ಸಂಭಾವನೆ ಜೊತೆಗೆ ನೈಜಾಂ ಭಾಗದ ವಿತರಣೆ ಹಕ್ಕು ಕೇಳುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಚಿತ್ರದಲ್ಲಿ ಪ್ರಿಯಾಂಕ ಮೋಹನ್ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ.