ಶಿವರಾಜ್‌ಕುಮಾರ್ ನಟನೆಯ 'ಬೇಲ್' ಸಿನಿಮಾ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಶೀಘ್ರದಲ್ಲೇ 'ಜೈಲರ್'-2 ಚಿತ್ರದಲ್ಲಿ ನರಸಿಂಹನಾಗಿ ಅಬ್ಬರಿಸೋಕೆ ಶಿವಣ್ಣ ಸಜ್ಜಾಗಿದ್ದಾರೆ. ಮತ್ತೊಂದು ಕಡೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮದೇ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'A ಫಾರ್ ಆನಂದ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದೆ.
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಚಿತ್ರದಲ್ಲಿ ಶಿವಣ್ಣನ ಜೋಡಿಯಾಗಿ ನಟಿಸಬಹುದು ಎಂದು ಗುಲ್ಲಾಗಿತ್ತು. ಈಗ ಆ ವದಂತಿ ಸುಳ್ಳಾಗಿದೆ. ಬಾಲಿವುಡ್ ಮತ್ತೊಬ್ಬ ನಟಿ ರವೀನಾ ಟಂಡನ್ ನಾಯಕಿಯಾಗಿ ನಟಿಸುವುದು ಪಕ್ಕಾ ಆಗಿದ್ದಾರೆ. ದಶಕಗಳ ಹಿಂದೆ 'ಉಪೇಂದ್ರ' ಚಿತ್ರದ ಮೂಲಕ ಆಕೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. 'ಕೆಜಿಎಫ್' ಸರಣಿ ಸಿನಿಮಾಗಳಲ್ಲಿ ರಮಿಕಾ ಸೇನ್ ಆಗಿ ಅಬ್ಬರಿಸಿದ್ದರು. ಇದೀಗ ಶಿವರಾಜ್‌ಕುಮಾರ್ ಜೊತೆ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ 'A ಫಾರ್ ಆನಂದ್' ಸಿನಿಮಾ ಚಿತ್ರೀಕರಣ ಶುರುವಾಗಿದೆ. ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ರವೀನಾ ಟಂಡನ್ ಕೂಡ ಭಾಗಿ ಆಗಿದ್ದಾರೆ. ಶ್ರೀನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಫನ್ನಿ ಟೀಸರ್ ಬಿಟ್ಟು ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದ್ದರು. 'ಘೋಸ್ಟ್' ಚಿತ್ರಕ್ಕೆ ಶಿವಣ್ಣನ ಜೊತೆ ಶ್ರೀನಿ ಕೆಲಸ ಮಾಡಿದ್ದರು. ಇದೀಗ ಮತ್ತೆ ಜೋಡಿ ಒಂದಾಗಿದೆ.
ಶ್ರೀನಿ ನಿರ್ದೇಶಿಸಿ ನಟಿಸಿರುವ 'ಬೀರ್‌ಬಲ್- 2' ಚಿತ್ರದ ಅತಿಥಿ ಪಾತ್ರದಲ್ಲಿ ಕೂಡ ಶಿವಣ್ಣ ಮಿಂಚಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಕೂಡ ತೆರೆಗೆ ಬರಲಿದೆ. ಮಹೇಂದ್ರ ಸಿಂಹ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯಾ ಸಂಗೀತ 'A ಫಾರ್ ಆನಂದ್' ಚಿತ್ರಕ್ಕಿದೆ. 'ಮಸ್ತ್ ಮಸ್ತ್' ಹುಡುಗಿ ಎಂದೇ ಕನ್ನಡ ಸಿನಿರಸಿಕರಿಗೆ ಪರಿಚಿತರಾಗಿರುವ ರವೀನಾ ಇದೀಗ ಸೆಂಚುರಿ ಸ್ಟಾರ್ ಜೊತೆ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ. ತಮಿಳಿನ 'ವಿಶ್ವನಾಥ್ ಅಂಡ್ ಸನ್ಸ್' ಚಿತ್ರದಲ್ಲಿ ಇತ್ತೀಚೆಗೆ ರವೀನಾ ನಟಿಸಿದ್ದು ಗೊತ್ತೇಯಿದೆ.