ಭಾರತದ ಶ್ರೇಷ್ಠ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನವನ್ನಾಧರಿಸಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ನಿರ್ಮಾಪಕರಾದ ಅಲ್ಲು ಅರವಿಂದ್, ರಾಕ್‌ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸ್ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಸೆಪ್ಟೆಂಬರ್ 16ರಂದು ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮ ವಾರ್ಷಿಕೋತ್ಸವದ ಸಂಭ್ರಮದಲ್ಲೇ ಚೆನ್ನೈನ ಮ್ಯೂಸಿಕ್ ಅಕಾಡೆಮಿಯಲ್ಲಿ ಈ ಚಿತ್ರಕ್ಕೆ ಚಾಲನೆ ಸಿಕ್ಕಿದೆ.
ಚಿತ್ರದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ಕನ್ನಡತಿ ರಶ್ಮಿಕಾ ಮಂದಣ್ಣ ನಿರ್ವಹಿಸುತ್ತಿದ್ದಾರೆ. ಗೌತಮ್ ತಿನ್ನನೂರಿ ನಿರ್ದೇಶನದ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಟ ಕಮಲ್ ಹಾಸನ್ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕುಟುಂಬದ ಸದಸ್ಯರು, ಹೆಸರಾಂತ ಕರ್ನಾಟಕ ಸಂಗೀತ ಕಲಾವಿದರು ಹಾಗೂ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಶಿವಕುಮಾರ್, ನಿರ್ದೇಶಕ ಮಹೇಂದ್ರನ್, ಸುಹಾಸಿನಿ, ಸಮುದ್ರಕಣಿ, ನಿರ್ಮಾಪಕರಾದ ಕಲೈಪುಲಿ ಎಸ್. ಧಾನು, ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಮೊಮ್ಮಗ ಚಂದ್ರಶೇಖರ್ ಹಾಗೂ ಅವರ ಪತ್ನಿ ಮಾಲಾ ಸೇರಿದಂತೆ ಚಿತ್ರರಂಗ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರದ ಹಲವು ಗಣ್ಯರು ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. 'ಎಂಎಸ್' ಹೆಸರಿನಲ್ಲಿ ಸಿನಿಮಾ ತೆರೆಗೆ ಬರಲಿದೆ.
ಈ ಬಯೋಪಿಕ್ ನಮ್ಮೆಲ್ಲರ ಹಲವು ವರ್ಷಗಳ ಕನಸು. ಈ ಯೋಜನೆಯ ಹಿಂದೆ ಏಳು-ಎಂಟು ವರ್ಷಗಳ ಪರಿಶ್ರಮ ಹಾಗೂ ಸಂಶೋಧನೆ ಅಡಗಿದೆ. ಅಲ್ಲು ಅರವಿಂದ್ ಗಾರು ಹಾಗೂ ಬನ್ನಿ ವಾಸ್ ಅವರೊಂದಿಗೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಕ್ಕೆ ನನಗೆ ಅಪಾರ ಸಂತೋಷವಾಗುತ್ತಿದೆ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ. ನಿರ್ದೇಶಕ ಗೌತಮ್ ತಿನ್ನನೂರಿ ಮಾತನಾಡಿ "ಒಂದು ವರ್ಷದಿಂದ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಹೆಸರು, ನಮ್ಮ ಇಡೀ ತಂಡಕ್ಕೆ ಒಂದು ಮಂತ್ರದಂತಾಗಿದೆ. ಅವರು ಕೇವಲ ಒಬ್ಬ ಶ್ರೇಷ್ಠ ಗಾಯಕಿ ಮಾತ್ರವಲ್ಲ, ಹಲವು ತ್ಯಾಗಗಳನ್ನು ಮಾಡಿದ ವ್ಯಕ್ತಿತ್ವ ಅವರದು ಎಂದು ಗೊತ್ತಾಯಿತು. ಅವರ ಎಲ್ಲಾ ಸಾಧನೆಗಳ ಹಿಂದಿರುವ ಮಹಿಳೆಯನ್ನು ತೆರೆಯ ಮೇಲೆ ತರುವುದೇ ನಮ್ಮ ಉದ್ದೇಶವಾಗಿತ್ತು. ನಮ್ಮ ಚಿತ್ರದ ಮೂಲಕ ಈ ಪೀಳಿಗೆಗೆ ಈ ಪ್ರಬಲ ಸಂದೇಶವನ್ನು ತಲುಪಿಸಲು ಮುಂದಾಗಿದ್ದೇವೆ" ಎಂದು ತಿಳಿಸಿದ್ದಾರೆ.
"ಒಬ್ಬ ನಟಿಯಾಗಿ ಇಂತಹ ಅದ್ಭುತ ಅವಕಾಶ ದೊರೆತಿರುವುದಕ್ಕೆ ನನ್ನ ಹೃದಯ ತುಂಬಿ ಬಂದಿದೆ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಸುಬ್ಬುಲಕ್ಷ್ಮೀ ಅವರ ಅಸಾಧಾರಣ ಜೀವನ ಪಯಣದ ಒಂದು ಸಣ್ಣ ಭಾಗವಾಗಲು ಅವಕಾಶ ದೊರೆತಿರುವುದಕ್ಕೆ ನನಗೆ ಅಪಾರ ಹೆಮ್ಮೆ ಹಾಗೂ ಗೌರವವಿದೆ. ಈ ಪಾತ್ರವನ್ನು ಎಲ್ಲರೂ ಮೆಚ್ಚುವ ರೀತಿಯಲ್ಲಿ ತೆರೆಮೇಲೆ ಮೂಡಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತೇನೆ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಕಮಲ್ ಹಾಸನ್, "ಎಂ.ಎಸ್. ಸುಬ್ಬುಲಕ್ಷ್ಮಿ ತಮ್ಮ ಕಂಠದ ಮೂಲಕ ಭಾರತವನ್ನು, ವಿಶೇಷವಾಗಿ ದಕ್ಷಿಣ ಭಾರತವನ್ನು ಒಗ್ಗೂಡಿಸಿದ ಸಂಗೀತ ಸಾಮ್ರಾಜ್ಞಿ. ಅವರು ಸಂಸ್ಕೃತ, ಹಿಂದಿ, ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಅವರ ಸುಪ್ರಭಾತಂ, ಲಲಿತಾ ಸಹಸ್ರನಾಮಂ ಅಥವಾ ರಂಗಪುರ ವಿಹಾರವನ್ನು ಕೇಳಿದಾಗಲೆಲ್ಲಾ ನನ್ನ ಹೃದಯ ಸಂತೋಷದಿಂದ ತುಂಬುತ್ತದೆ. ಮಹಾತ್ಮ ಗಾಂಧೀಜಿ ಕೂಡ ಅವರ ಸಂಗೀತದ ಮಹಾನ್ ಅಭಿಮಾನಿಯಾಗಿದ್ದರು. ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ಶುಭ ಹಾರೈಸಿದ್ದಾರೆ.