ಬರ್ತಾ ಬರ್ತಾ ಓಟಿಟಿ ದರ್ಬಾರ್ ಹೆಚ್ಚಾಗ್ತಿದೆ. ಭಾರೀ ಮೊತ್ತಕ್ಕೆ ದೊಡ್ಡ ಸಿನಿಮಾಗಳ ರೈಟ್ಸ್ ಖರೀದಿಸಿ ಡಿಜಿಟಲ್ ಸ್ಟ್ರೀಮಿಂಗ್ ಸಂಸ್ಥೆಗಳು ಸುದ್ದಿ ಮಾಡ್ತಿದೆ. ಇದೀಗ ಕಮಲ್ ಹಾಸನ್ ತಾವು ನಿರ್ಮಾಣ ಮಾಡುತ್ತಿರುವ 3 ಸಿನಿಮಾಗಳ ಓಟಿಟಿ ಡೀಲ್ ಕುದುರಿಸಿದ್ದಾರೆ ಎಂದು ತಮಿಳು ಚಿತ್ರರಂಗದಲ್ಲಿ ಸುದ್ದಿ ಆಗ್ತಿದೆ. ನಿರ್ಮಾಣದ ಹಂತದಲ್ಲೇ ಭಾರೀ ಮೊತ್ತದ ವ್ಯವಹಾರ ಇದು ಎನ್ನಲಾಗ್ತಿದೆ.
ಕಮಲ್ ಹಾಸನ್ ಸಿನಿಕರಿಯರ್ ಮುಗಿದೇ ಹೋಯ್ತು ಎನ್ನುವ ಸಮಯದಲ್ಲಿ 'ವಿಕ್ರಮ್' ಸಿನಿಮಾ ಬಂದು ಹಿಟ್ ಆಗಿತ್ತು. ಬಳಿಕ ಮತ್ತೆ ಕಮಲ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು. ಇತ್ತೀಚೆಗೆ ತಮ್ಮ ರಾಜ್ಕಮಲ್ ಇಂಟರ್ನ್ಯಾಷನಲ್ ಸಂಸ್ಥೆ ಮೂಲಕ ಭಾರೀ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ರಜನಿಕಾಂತ್ ನಟನೆಯ 'ಧರ್ಮನ್' ಸಿನಿಮಾ ಕೂಡ ಈ ಲಿಸ್ಟ್ನಲ್ಲಿದೆ. ಅಶ್ವಥ್ ಮಾರಿಮುತ್ತು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
'ಧರ್ಮನ್' ಜೊತೆಗೆ ಶಿವಕಾರ್ತಿಕೇಯನ್ ನಟನೆಯ 'ಸಿಯಾನ್' ಹಾಗೂ 'ಸಂಡಿಯಾರ್' ಎಂಬ ಮತ್ತೊಂದು ಚಿತ್ರವನ್ನು ಕಮಲ್ ನಿರ್ಮಿಸಿ ನಟಿಸಿಸುತ್ತಿದ್ದಾರೆ. ಇದೀಗ ಈ ಮೂರು ಚಿತ್ರಗಳ ಓಟಿಟಿ ಹಾಗೂ ಸ್ಯಾಟಲೈಟ್ ಬ್ಯುಸಿನೆಸ್ ನಡೆದಿದೆ ಎಂದು ಸುದ್ದಿ ಆಗ್ತಿದೆ. ಹಾಟ್ಸ್ಟರ್ ಜೊತೆ 350 ಕೋಟಿ ರೂ.ಗೆ ಮಾತುಕತೆ ನಡೆದಿದೆ ಎನ್ನಲಾಗ್ತಿದೆ. ದೊಡ್ಡ ಸಿನಿಮಾಗಳ ಓಟಿಟಿ ರೈಟ್ಸ್ಗೆ ಪ್ರೈಂ ವೀಡಿಯೋ ಹಾಗೂ ನೆಟ್ ಫ್ಲಿಕ್ಸ್ ನಡುವೆ ಪೈಪೋಟಿ ಇರುತ್ತದೆ. ಆದರೆ ಈ ಬಾರಿ ಹಾಟ್ಸ್ಟರ್ ಮುಂದೆ ಬಂದಿದೆ.
ರಜನಿಕಾಂತ್ ನಟನೆಯ 'ಜೈಲರ್-2' ರೈಟ್ಸ್ ಕೂಡ ಪ್ರೈಂ ವೀಡಿಯೋ ಪಾಲಾಗಿದೆ. ಸದ್ಯ ಕಮಲ್ ನಿರ್ಮಾಣದ 'ಧರ್ಮನ್' ಚಿತ್ರದ ಓಟಿಟಿ ರೈಟ್ಸ್ 150 ಕೋಟಿ ರೂ.ಗೂ ಹಾಟ್ಸ್ಟರ್ ಖರೀದಿಸಿದೆ. ಅದೇ ರೀತಿ ಸಿಯಾನ್ ಡಿಜಿಟಲ್ ರೈಟ್ಸ್ 75 ಕೋಟಿ ರೂ. ಹಾಗೂ 'ಸಂಡಿಯಾರ್' ಚಿತ್ರದ ರೈಟ್ಸ್ 125 ಕೋಟಿ ರೂ.ಗೆ ಬಿಕರಿಯಾಗಿದೆ ಎಂದು ಹೇಳಲಾಗ್ತಿದೆ. ಇನ್ನು ಮೂರು ಸಿನಿಮಾಗಳ ಆಡಿಯೋ ರೈಟ್ಸ್ ಸರೆಗಮ ಆಡಿಯೋ ಕಂಪೆನಿಗೆ 63 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎನ್ನಲಾಗ್ತಿದೆ. ಅಲ್ಲಿಗೆ 400 ಕೋಟಿ ರೂ.ಗೂ ದೊಡ್ಡ ಬ್ಯುಸಿನೆಸ್ ಇದು ಎಂದು ಚರ್ಚೆ ನಡೀತಿದೆ.
ದಶಕಗಳ ಬಳಿಕ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ನೆಲ್ಸನ್ ನಿರ್ದೇಶನದ ಮಲ್ಟಿಸ್ಟಾರರ್ ಚಿತ್ರದಲ್ಲಿ ನಟಿಸೋ ಮುನ್ನ ಕಮಲ್ ನಿರ್ಮಾಣದ 'ಧರ್ಮನ್' ಚಿತ್ರದಲ್ಲಿ ಸೂಪರ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಸಿಮ್ರನ್, ಶ್ರೀಲೀಲಾ, ನಯನತಾರಾ ಕೂಡ ನಟಿಸುತ್ತಿದ್ದಾರೆ. ಡಾಕ್ಟರ್ ಅವತಾರದಲ್ಲಿ ತಲೈವಾ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 14ಕ್ಕೆ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.