ಸೂಪರ್ ಸ್ಟಾರ್ ರಜನಿಕಾಂತ್ ಸ್ಟೈಲ್ ಕಿಂಗ್ ಎಂದು ಫೇಮಸ್ ಆಗಿರುವುದು ಗೊತ್ತೇಯಿದೆ. ನಟನೆಗಿಂತ ರಜನಿಕಾಂತ್ ಸ್ಟೈಲ್ ನೋಡಿ ಮೆಚ್ಚಿಕೊಂಡವರೇ ಹೆಚ್ಚು. ತಲೈವಾ ಬಾಡಿ ಲಾಂಗ್ವೇಜ್, ವಾಕಿಂಗ್ ಸ್ಟೈಲ್, ಡೈಲಾಗ್ ಡೆಲಿವರಿ ಸ್ಟೈಲ್, ಎಲ್ಲಕ್ಕಿಂತ ಮುಖ್ಯವಾಗಿ ಸಿಗರೇಟ್ ಸೇದುವ ಸ್ಟೈಲ್ ಅಭಿಮಾನಿಗಳಿಗೆ ಬಹಳ ಇಷ್ಟ. ನಿಮಗೆ ಗೊತ್ತಾ ರಜನಿಕಾಂತ್ ಹೀಗೆ ಸ್ಟೈಲ್ ಆಗಿ ಸಿಗರೇಟ್ ಎಸೆಯುವುದನ್ನು ಕಲಿತಿದ್ದೇ ಕನ್ನಡ ಸಿನಿಮಾ ನೋಡಿ.. ಆ ಕನ್ನಡ ನಟನನ್ನು ನೋಡಿ..

ಸದ್ಯ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 75 ವರ್ಷ ವಯಸ್ಸಿನಲ್ಲೂ ಬರೀ ತಮ್ಮ ಸ್ಟೈಲ್ ಮೂಲಕವೇ ಚಿತ್ರವನ್ನು ರಜನಿಕಾಂತ್ ಗೆಲ್ಲಿಸಿಬಿಟ್ಟಿದ್ದಾರೆ. 'ಜೈಲರ್' ಚಿತ್ರದ ರೀತಿಯಲ್ಲೇ ಸೀಕ್ವೆಲ್‌ನಲ್ಲಿ ಕೂಡ ತಲೈವಾ ಸಿಗಾರ್ ಸೇದುವ ದೃಶ್ಯಗಳು ಹೈಲೆಟ್ ಆಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಮತ್ತೊಮ್ಮೆ ಅದೇ ಸ್ಟೈಲ್ ಪ್ರದರ್ಶಿಸಿ ರಜನಿಕಾಂತ್ ಮ್ಯಾಜಿಕ್ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ತೆರೆಮೇಲೆ ಸಿಗರೇಟ್ ಸೇದುವುದನ್ನು ತೋರಿಸುವುದು ಬೇಡ ಎಂದು ರಜನಿಕಾಂತ್ ಚೂಯಿಂಗ್ ಗಮ್ ಅನ್ನು ಇದೇ ರೀತಿ ಎಸೆದು ಸ್ಟೈಲ್ ಮಾಡುತ್ತಿದ್ದರು.

ರಜನಿಕಾಂತ್ ಹೀಗೆ ಸ್ಟೈಲ್ ಆಗಿ ಬಾಯಿಗೆ ಸಿಗರೇಟ್ ಎಸೆಯುವುದನ್ನು ಇತ್ತೀಚೆಗೆ ಸಿನಿಮಾಗಳಲ್ಲಿ ತೋರಿಸುತ್ತಿಲ್ಲ. ಚಿತ್ರರಂಗಕ್ಕೆ ಬಂದ ಆರಂಭದ ತಮ್ಮ ಸಿನಿಮಾಗಳಲ್ಲಿ ಹೀಗೆ ಸ್ಟೈಲ್ ಆಗಿ ರಜನಿಕಾಂತ್ ಸಿಗರೇಟ್ ಸೇದುತ್ತಿದ್ದರು. ಆದರೆ ಚಿತ್ರರಂಗ ಪ್ರವೇಶಿಸುವ ಮುನ್ನ ಅಂದ್ರೆ ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದಾಗಲೇ ಹೀಗೆ ಸ್ಟೈಲ್ ಮಾಡುತ್ತಿದ್ದರು. ಹಣೆಯ ಮೇಲಿನ ಕೂದಲನ್ನು ಸ್ಟೈಲ್ ಆಗಿ ಪಕ್ಕಕ್ಕೆ ಸರಿಸುತ್ತಾ, ಸಿಗರೇಟ್ ಬಾಯಿಗೆ ಎಸೆದುಕೊಳ್ಳುತ್ತಾ ಮ್ಯಾಜಿಕ್ ಮಾಡುವ ಪ್ರಯತ್ನ ಮಾಡ್ತಿದ್ದರು.

ಕಂಡೆಕ್ಟರ್ ಆಗಿದ್ದ ದಿನಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಹೀಗೆ ಸಿಗರೇಟ್ ಬಾಯಿಗೆ ಎಸೆದುಕೊಳ್ಳುವುದನ್ನು ಶಿವಾಜಿರಾವ್ ಅಭ್ಯಾಸ ಮಾಡುತ್ತಿದ್ದರು. ಕೆಲವೊಮ್ಮೆ ಸಿಗರೇಟ್ ಕೆಳಗೆ ಬಿದ್ದರೂ ಮತ್ತೆ ಎತ್ತಿಕೊಂಡು ಅಭ್ಯಾಸ ಮಾಡುವುದನ್ನು ಬಿಡುತ್ತಿರಲಿಲ್ಲ. ಆದರೆ ಇದಕ್ಕೆಲ್ಲಾ ಪ್ರೇರಣೆ ಆಗಿದ್ದು ಕನ್ನಡದ 'ನಾಗರಹಾವು' ಸಿನಿಮಾ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದಲ್ಲಿ ಜಲೀಲನಾಗಿ ನೆಗೆಟಿವ್ ಪಾತ್ರದಲ್ಲಿ ಅಂಬರೀಶ್ ನಟಿಸಿದ್ದರು. ಮೊದಲ ದೃಶ್ಯದಲ್ಲಿ ಅಂಬಿ ಹೀಗೆ ಸ್ಟೈಲ್ ಆಗಿ ಸಿಗರೇಟ್ ಅನ್ನು ಬಾಯಿಗೆ ಎಸೆದುಕೊಂಡು 'ಏನ್ ಬುಲ್ ಬುಲ್ ಮಾತಾಡಕ್ಕಿಲ್ವಾ' ಎಂದು ಡೈಲಾಗ್ ಹೊಡೆಯುತ್ತಾರೆ.

ನಾನು ಕಂಡೆಕ್ಟರ್ ಆಗಿದ್ದ ಸಮಯದಲ್ಲಿ 'ನಾಗರಹಾವು' ಸಿನಿಮಾ ಬಿಡುಗಡೆ ಆಗಿತ್ತು. ಕಂಡೆಕ್ಟರ್ ಯೂನಿಫಾರ್ಮ್‌ನಲ್ಲೇ ಹೋಗಿ ಸಿನಿಮಾ ನೋಡಿದ್ದೆ. ಜಲೀಲನಾಗಿ ಅಂಬಿ ನಟನೆ ನೋಡಿ ಅವರು ಸಿಗರೇಟ್ ಎಸೆಯುವ ಸ್ಟೈಲ್ ನೋಡಿ ಅಚ್ಚರಿಗೊಂಡಿದ್ದೆ. ನಾನು ಹೀಗೆ ಸ್ಟೈಲ್ ಮಾಡುವುದು ಕಲಿತ್ತಿದ್ದೆ ಅಂಬರೀಶ್ ಅವರನ್ನು ನೋಡಿ ಎಂದು ಸ್ವತಃ ರಜನಿಕಾಂತ್ ಒಮ್ಮೆ ಹೇಳಿದ್ದರು.

ರಜನಿಕಾಂತ್ ತಮ್ಮ ಸಿಗರೇಟ್ ಸ್ಟೈಲ್ ಅಭ್ಯಾಸ ಬಿಡಲಿಲ್ಲ. ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಇದ್ದಾಗಲೂ ಅದನ್ನು ಮುಂದುವರೆಸಿದ್ದರು. ಮುಂದೆ ಕೆ. ಬಾಲಚಂದರ್ ಕಣ್ಣಿಗೆ ಬಿದ್ದಿದ್ದರು. ರಜನಿಕಾಂತ್ ಅವರ ಇಂಥದ್ದೇ ಸ್ಟೈಲ್ ನೋಡಿ 'ಅಪೂರ್ವ ರಾಗಂಗಳ್' ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು. ಆ ಬಳಿಕ ಶಿವಾಜಿರಾವ್ ಹಿಂದಿರುಗಿ ನೋಡಲೇ ಇಲ್ಲ. ಇವತ್ತಿಗೂ ರಜನಿಕಾಂತ್ ಸಿಗರೇಟ್ ಸ್ಟೈಲ್ ಕಮಾಲ್ ಮಾಡುತ್ತಲೇ ಇದೆ.