ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕನ್ನಡದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಸಿಲ್ಕ್ ಮಂಜು ಕೊನೆಯುಸಿರೆಳೆದಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ(ಅಕ್ಟೋಬರ್ 26) ರಾತ್ರಿ 9. 30ರ ಸುಮಾರಿಗೆ ಅವರು ವಿಧಿವಶರಾಗಿದ್ದಾರೆ.

ಉಪೇಂದ್ರ ಅವರನ್ನು ಹೀರೊ ಮಾಡಿದ್ದು ಇದೇ ಸಿಲ್ಕ್ ಮಂಜು. ಉಪೇಂದ್ರ ನಿರ್ದೇಶಿಸಿ ಮೊದಲ ಬಾರಿ ನಟಿಸಿದ್ದ 'ಎ' ಚಿತ್ರವನ್ನು ಅವರು ನಿರ್ಮಿಸಿದ್ದರು. 'ಪ್ರತ್ಯರ್ಥ', 'ಹಗಲುವೇಷ', 'ಸೂರ್ಯಕಾಂತಿ', 'ನಿಮ್ಮ ಖಾತೆಯಲ್ಲಿ ಹಣವಿಲ್ಲ', 'ಸೈಕಿಕ್', 'ಟೆರರ್' ಹೀಗೆ ಒಂದಷ್ಟು ಸಿನಿಮಾಗಳಿಗೆ ಮಂಜು ಬಂಡವಾಳ ಹೂಡಿದ್ದರು. ಕೆಲ ದಿನಗಳಿಂದ ಕಿಡ್ನಿ ಫೇಲ್ಯೂರ್ ಆಗಿ ಮಂಜು ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಕಿಡ್ನಿ ಕಸಿ ಮಾಡಿ ಹೊಸ ಕಿಡ್ನಿ ಜೋಡನೆ ಮಾಡಲಾಗಿತ್ತು. ಆದರೆ ಅದು ಸೆಟ್ ಆಗದೇ ಬಳಲುವಂತಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ.

ಬಿ. ಜಿ ಮಂಜುನಾಥ್ ಎನ್ನುವುದು ಅವರ ಪೂರ್ಣ ಹೆಸರು. ಕೊನೆಯದಾಗಿ ನಿರ್ಮಿಸಿದ 'ಟೆರರ್' ಚಿತ್ರದಿಂದ ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ಆಘಾತದಿಂದ ಹೊರಬರಲು ಸಾಧ್ಯವಾಗಿರಲಿಲ್ಲ.