ನವರಸ ನಾಯಕ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿರುತ್ತಾರೆ. ಪ್ರಪಂಚದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ರಾಯರ ಬಗ್ಗೆ ತಮ್ಮ ಜೀವನದಲ್ಲಾದ ಪವಾಡಗಳ ಬಗ್ಗೆ ಪೋಸ್ಟ್ ಮಾಡುತ್ತಾರೆ. ಯುವಜನತೆಗೆ ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಇದೀಗ ಮದುವೆ ಎನ್ನುವುದು ಯಾವ ಹಂತಕ್ಕೆ ಬಂದು ನಿಂತಿದೆ ಎನ್ನುವುದನ್ನು ತಮ್ಮ ರೀತಿ ಬರೆದುಕೊಂಡಿದ್ದಾರೆ.

ಪರಿಮಳ ಅವರನ್ನು ಜಗ್ಗೇಶ್ ಪ್ರೀತಿಸಿ ಮದುವೆ ಆಗಿದ್ದು ಗೊತ್ತೇಯಿದೆ. ಅವರಿಬ್ಬರ ಪ್ರೀತಿ- ಮದುವೆ ಸುಪ್ರೀಂ ಕೋರ್ಟ್‌ವರೆಗೆ ಹೋಗಿ ತಲುಪಿದ್ದರ ಬಗ್ಗೆಯೂ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಇವತ್ತು ಮದುವೆ ಎನ್ನುವುದು ಕೊಟ್ಟು ಕೊಳ್ಳುವ ಮಟ್ಟಕ್ಕೆ ಬಂದುಬಿಟ್ಟಿದೆ. ಅವತ್ತು ಏನನ್ನೂ ಬಯಸದೇ ಪರಿಮಳ ನನ್ನನ್ನು ನಂಬಿ ಬಂದಳು ಎಂದು ಜಗ್ಗೇಶ್ ಪೋಸ್ಟ್ ಮಾಡಿದ್ದಾರೆ.

ರಾಯರೆ ನಿಮ್ಮ ಕೃಪೆ ಈ ಪಾಮರನ ಮೇಲೆ ಎಷ್ಟಿದೆ, ಧನ್ಯವಾದ ಗುರುವೆ ಅನ್ನಿಸಿತು. ಕಾರಣ, ರಾಯರ ಹೆಸರಿನ ಮಡದಿ ಸಿಕ್ಕಳು.. ಶ್ರೀಮಂತ ತಂದೆಯ ತ್ಯಜಿಸಿ ಸಾಮಾನ್ಯನಾದ ನನ್ನ ನಂಬಿ ಬಂದುಬಿಟ್ಟಳು ಪರಿಮಳ.. ಆಗ ನನಗೆ 20, ಈಗ 64 ಆಗಲು ಈಗಲೂ ನನ್ನ ಸಂಕಲ್ಪ ಒಂದೇ, ನನ್ನ ನಂಬಿ ಕೈಹಿಡಿದವಳ ಕೊನೆಯವರೆಗೂ ಜೋಪಾನ ಮಾಡಬೇಕು ಎಂದು.. ಅಂದು ಇಂದು ಇದ್ದುದರಲ್ಲೇ ನಾವಿಬ್ಬರು ಸಂತೋಷವಾಗಿ ಬಾಳುತ್ತಿದ್ದೇವೆ ರಾಯರ ಕೃಪೆ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ಜಗ್ಗೇಶ್ ತಮ್ಮ ಮದುವೆಯ ವಿಚಾರವನ್ನು ನೆನಪಿಸಿಕೊಳ್ಳಲು ಕಾರಣ ಏನು ಎನ್ನವುದನ್ನು ವಿವರಿಸಿದ್ದಾರೆ. "ಇಂದಿನ ಮಕ್ಕಳು ಮದುವೆಯಾಗಲು ಇಲ್ಲಸಲ್ಲದ ಲೆಕ್ಕ ಹಾಕಿ, ಸ್ವಲ್ಪ ವ್ಯತ್ಯಾಸ ಬಂದರೆ ಡೈವೋರ್ಸ್ ಕೊಟ್ಟು ಹೊರನಡೆದು ಬಿಡುತ್ತಾರೆ.. ಹುಡುಗ ಹುಡುಗಿ ಚೆನ್ನಾಗಿದ್ದರೂ ಏನಿದೆ? ಏನು ಕೊಡುತ್ತಾರೆ? ಕೆಟ್ಟ ಲೆಕ್ಕ ಹಾಕಿ ಮದುವೆ ಆಗದೆ 35 ಗಡಿ ದಾಟಿ ನೊಂದು ನಿಲ್ಲುತ್ತಾರೆ... ನನ್ನ ಪರಿಚಿತ ಹುಡುಗನಿಗಾಗಿ ಹೆಣ್ಣು ಹೆತ್ತ ತಾಯಿ ಬಳಿ ನಾನೇ ಮಾತಾಡಿದರೂ, ಇಲ್ಲಾ ಅಣ್ಣ, ಹುಡುಗ ಸ್ವಲ್ಪ ದಪ್ಪ, ತಲೆ ಕೂದಲು ಉದುರಿದೆ ಎಂದು ಬಿಟ್ಟರು. ನೋಡಿದರೆ ಹುಡುಗಿಯ ಮನೆಯವರು ಬಡವರು! 45 ಸಾವಿರ ಸಂಬಳ ಪಡೆಯುವ ಹುಡುಗ ಬೇಡವಂತೆ.. ಮುಂದೆ ಮದುವೆ ಕಾಟಾಚಾರ ಸಂಬಂಧ ಅಷ್ಟೇ ಅನ್ನಿಸಿತು" ಎಂದು ನವರಸ ನಾಯಕ ಬರೆದುಕೊಂಡಿದ್ದಾರೆ.