'ಜೈಲರ್-2' ಚಿತ್ರದಲ್ಲಿ ರಜನಿಕಾಂತ್ ಒನ್ಮ್ಯಾನ್ ಶೋ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಸಿನಿಮಾ ಬಾಕ್ಸಾಫೀಸ್ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಎರಡನೇ ವಾರಾಂತ್ಯ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಓಟಿಟಿಗೆ ಬರುವ ಮುನ್ನ ಸಿನಿಮಾ 1000 ಕೋಟಿ ರೂ. ಕ್ಲಬ್ ಸೇರುತ್ತಾ ಎನ್ನುವ ಚರ್ಚೆ ಶುರುವಾಗಿದೆ.
ಮೊದಲ ವಾರ 'ಜೈಲರ್-2' ಸಿನಿಮಾ ವಿಶ್ವದಾದ್ಯಂತ 549 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಸನ್ ಪಿಕ್ಚರ್ಸ್ ಸಂಸ್ಥೆಯೇ ಮಾಹಿತಿ ನೀಡಿತ್ತು. ಎರಡನೇ ವಾರ ಸಹಜವಾಗಿಯೇ ಸಿನಿಮಾ ಗಳಿಕೆ ಕಮ್ಮಿ ಆಗಿದೆ. ಆದರೆ ರಜನಿಕಾಂತ್ ಕ್ರೇಜ್ ಮಾತ್ರ ಮುಂದುವರೆದಿದೆ. 11 ದಿನಕ್ಕೆ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ 12 ದಿನಕ್ಕೆ ಕಾಲಿಟ್ಟಿದೆ.
ಒಟ್ಟು ಗಳಿಕೆ
ಮೊದಲ 11 ದಿನದಲ್ಲಿ 710 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಈ ಮೂಲಕ ಬಾಕ್ಸಾಫೀಸ್ನಲ್ಲಿ 'ಜೈಲರ್-2' ಹೊಸ ಇತಿಹಾಸ ನಿರ್ಮಿಸಿದಂತಾಗಿದೆ. ಎರಡನೇ ಶನಿವಾರ ಹಾಗೂ ಭಾನುವಾರ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಭಾರತದಲ್ಲಿ ಮಾತ್ರ ಭಾನುವಾರ 25.70 ಕೋಟಿ ರೂ. ಬಾಚಿಕೊಂಡಿರುವುದಾಗಿ ಹೇಳಲಾಗ್ತಿದೆ. ಈ ವರ್ಷ ತಮಿಳಿನಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ.
ಕರ್ನಾಟಕದಲ್ಲಿ ಗಳಿಕೆ
ತಮಿಳುನಾಡು ಬಿಟ್ಟರೆ 'ಜೈಲರ್-2' ಸಿನಿಮಾ ಕರ್ನಾಟಕದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದೆ. 11 ದಿನಕ್ಕೆ ರಾಜ್ಯದಲ್ಲಿ 79.6 ಕೋಟಿ ರೂ. ಕೊಳ್ಳೆ ಹೊಡೆದಿದೆ. ಮೊದಲ ವಾರ 62.41 ಕೋಟಿ ದೋಚಿದ್ದ ಸಿನಿಮಾ ಬಳಿಕ ದಿನ ಕ್ರಮವಾಗಿ 3.19 ಕೋಟಿ ರೂ, 3.15 ಕೋಟಿ ರೂ, 5.35 ಕೋಟಿ ರೂ, ಹಾಗೂ 5.5 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಓಟಿಟಿ ಸ್ಟ್ರೀಮಿಂಗ್
ಉತ್ತರ ಭಾರತದಲ್ಲಿ 'ಜೈಲರ್-2' ಸಿನಿಮಾ ಪ್ರದರ್ಶನಕ್ಕೆ ಹಿನ್ನಡೆಯಾಗಿತ್ತು. ಅದೇ ಕಾರಣಕ್ಕೆ 1000 ಕೋಟಿ ರೂ. ಕಲೆಕ್ಷನ್ ಕನಸು ನನಸಾಗುವುದು ಕಷ್ಟ ಎನ್ನಲಾಗ್ತಿದೆ. ಎರಡು ತಿಂಗಳ ಓಟಿಟಿ ಸ್ಟ್ರೀಮಿಂಗ್ ನಿಯಮಕ್ಕೆ ಸನ್ ಪಿಕ್ಚರ್ಸ್ ಸಂಸ್ಥೆ ಒಪ್ಪದೇ ಇದ್ದಿದ್ದೇ ಇದಕ್ಕೆ ಕಾರಣ ಎನ್ನಲಾಗ್ತಿದೆ. ನವೆಂಬರ್ 12ರಂದು ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಬಿಡುಗಡೆಯಾಗುವ ಸುಳಿವು ಸಿಕ್ಕಿದೆ.