ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಜನಿಕಾಂತ್ ನಟನೆಯ 'ಜೈಲರ್-2' ಬಿಡುಗಡೆ ದಿನಗಣನೆ ಶುರುವಾಗಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 15ಕ್ಕೆ ಗುರುವಾರವೇ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಕೂಡ ಟೈಗರ್ ಮುತ್ತುವೇಲ್ ಪಾಂಡಿಯನ್ ಆರ್ಭಟ ಜೋರಾಗಿದೆ. ಟಿಕೆಟ್‌ ಬುಕ್ ಮಾಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಬೆಳಗ್ಗೆ 6 ಗಂಟೆಗೆ 'ಜೈಲರ್-2' ಮೊದಲ ಪ್ರದರ್ಶನ ಬೆಂಗಳೂರಿನಲ್ಲಿ ಶುರುವಾಗಿದೆ. ಸದ್ಯ 4 ಚಿತ್ರಮಂದಿರಗಳಲ್ಲಿ 5 ಶೋಗಳ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಭಾನುವಾರ ಬೆಳಗ್ಗೆ ಮತ್ತಷ್ಟು ಚಿತ್ರಮಂದಿರಗಳ ಬುಕ್ಕಿಂಗ್ ಶುರುವಾಗಲಿದೆ. ಬೆಂಗಳೂರಿನಲ್ಲಿ ರಜನಿಕಾಂತ್ ಸಿನಿಮಾ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಶಿವರಾಜ್‌ಕುಮಾರ್, ಮೋಹನ್ ಲಾಲ್ ಹಾಗೂ ಹೃತಿಕ್ ರೋಷನ್ ಅತಿಥಿ ಪಾತ್ರಗಳಲ್ಲಿ ನಟಿಸಿರುವುದು ಮತ್ತಷ್ಟು ನಿರೀಕ್ಷೆ ಮೂಡಿಸಿದೆ.

ಟಿಕೆಟ್ ದರ

ಗುರುವಾರ ಬೆಳಗ್ಗೆ 6 ಗಂಟೆ ಶೋಗಳ ಟಿಕೆಟ್ ದರ ಗೋಲ್ಡ್ ಕ್ಲಾಸ್ 1000 ರೂ. ಹಾಗೂ ಸಿಲ್ವರ್ ಕ್ಲಾಸ್ 800 ರೂ. ನಿಗದಿಯಾಗಿದೆ. ಇದು ಬರೀ ಸಿಂಗಲ್ ಸ್ಕ್ರೀನ್ ಥಿಯೇಟರ್ ಟಿಕೆಟ್ ದರ ಮಾತ್ರ. ಮಾಲ್‌ಗಳಲ್ಲಿ ಮತ್ತಷ್ಟು ಹೆಚ್ಚು ನಿರೀಕ್ಷೆಯಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಬೆಳಗ್ಗಿನ ಫ್ಯಾನ್ಸ್ ಶೋ ಬಳಿಕ 300 ರೂ.ಗೆ ಟಿಕೆಟ್ ದರ ಇಳಿಯುವ ಸಾಧ್ಯತೆಯಿದೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಅಷ್ಟು ಸುಲಭವಾಗಿ ದರ ಕಮ್ಮಿ ಆಗುವುದಿಲ್ಲ.

ಬೆಂಗಳೂರಿನಲ್ಲಿ ಹಗಲು ದರೋಡೆ

ದೊಡ್ಡ ಸಿನಿಮಾಗಳು ಬಿಡುಗಡೆಯಾಗುವಾಗ ಟಿಕೆಟ್ ದರ ಹೆಚ್ಚಳ ಕರ್ನಾಟಕದಲ್ಲಿ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಸರ್ಕಾರ 200 ರೂ. ಟಿಕೆಟ್ ದರ ನಿಗದಿಗೆ ಮಾಡಿದ ಪ್ರಯತ್ನ ವ್ಯರ್ಥವಾಗಿತ್ತು. ನಮ್ಮ ನಿರ್ಮಾಪಕರೇ ಇದಕ್ಕೆ ಬೆಂಬಲ ಕೊಡಲಿಲ್ಲ. ಈಗ ಪರಭಾಷಾ ಚಿತ್ರಕ್ಕೆ 1000 ರೂ, 2000 ರೂ, ಕೊಟ್ಟು ಸಿನಿಮಾ ನೋಡುವಂತಾಗಿದೆ. ತಮಿಳುನಾಡಿನ ಮಲ್ಟಿಪ್ಲೆಕ್ಸ್‌ಗಳಲ್ಲೇ 'ಜೈಲರ್- 2' ಟಿಕೆಟ್ ದರ 300 ರೂ, ದಾಟಿಲ್ಲ. ಆದರೆ ಕರ್ನಾಟಕದಲ್ಲಿ 1000 ರೂ. ದಾಟಿರುವುದು ವಿಪರ್ಯಾಸ. ಒಂದರ್ಥದಲ್ಲಿ ಇದು ಹಗಲು ದರೋಡೆ ಎನ್ನುವಂತಾಗಿದೆ.

ಪ್ರೇಮದ ಊರಲಿ ಪೈಪೋಟಿ

ಕನ್ನಡದ 'ಪ್ರೇಮದ ಊರಲಿ' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ. ಹಾಗಾಗಿ 'ಜೈಲರ್- 2' ಚಿತ್ರಕ್ಕೆ ಒಳ್ಳೆ ಪೈಪೋಟಿ ಎದುರಾಗಲಿದೆ. ಗಣೇಶ್ ನಟನೆಯ 'ಬೃಂದಾವಿಹಾರಿ' ಸಿನಿಮಾ ರಿಲೀಸ್ ಡೇಟ್ ಮುಂದೂಡಲಾಗಿದೆ. ಹಾಗಾಗಿ 'ಜೈಲರ್- 2' ಜೊತೆ ತೆಲುಗಿನ 'ರಣಬಾಲಿ' ಸಿನಿಮಾ ಮಾತ್ರ ಈ ವಾರ ತೆರೆಗೆ ಬರಲಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಟಿಸಿದ್ದಾರೆ.