ಭಾರತದ ಶ್ರೇಷ್ಠ ಕರ್ನಾಟಕ ಸಂಗೀತ ಗಾಯಕಿ ಎಂ. ಎಸ್. ಸುಬ್ಬುಲಕ್ಷ್ಮಿ ಜೀವನಾಧರಿತ ಸಿನಿಮಾ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿತ್ತು. ಅಂತಿಮವಾಗಿ ಸಿನಿಮಾ ಘೋಷಣೆಯಾಗಿದೆ. ಸಾಯಿ ಪಲ್ಲವಿ ಅಲ್ಲ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದು ಖಚಿತವಾಗಿದೆ. ರಾಕ್‌ಲೈನ್ ವೆಂಕಟೇಶ್ ಕೂಡ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿರುವುದು ವಿಶೇಷ. ಸೆಪ್ಟೆಂಬರ್ 16ರಂದು ಸುಬ್ಬುಲಕ್ಷ್ಮಿ ಹುಟ್ಟುಹಬ್ಬದ ದಿನವೇ ಸಿನಿಮಾ ಸೆಟ್ಟೇರಲಿದೆ.
ಗೌತಮ್ ತಿನ್ನನೂರಿ ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಮುಂದಾಗಿರುವುದು ಕುತೂಹಲ ಮೂಡಿಸಿದೆ. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್, ಬನ್ನಿ ವಾಸು ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಬನ್ನಿ ವಾಸು ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಚೆನ್ನೈ ಮ್ಯೂಸಿಕ್ ಅಕಾಡೆಮಿಯಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಎಂ. ಎಸ್. ಸುಬ್ಬುಲಕ್ಷ್ಮಿ ಪಾತ್ರಕ್ಕೆ ರುಕ್ಮಿಣಿ ವಸಂತ್ ಸೇರಿ ಹಲವರ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ರಶ್ಮಿಕಾ ಆ ಸುವರ್ಣಾವಕಾಶ ಗಿಟ್ಟಿಸಿಕೊಂಡಿದ್ದಾರೆ.
'ಕಾಟೇರ' ಬಳಿಕ ರಾಕ್‌ಲೈನ್ ವೆಂಕಟೇಶ್ ಯಾವುದೇ ಸಿನಿಮಾ ನಿರ್ಮಾಣ ಮಾಡಿರಲಿಲ್ಲ. ಇದೀಗ ಎಂ. ಎಸ್. ಸುಬ್ಬುಲಕ್ಷ್ಮಿ ಚಿತ್ರ ತೆರೆಗೆ ತರಲು ಮುಂದಾಗಿದ್ದಾರೆ. ತಮಿಳುನಾಡಿನ ಮಧುರೈ ಮೂಲದ ಸುಬ್ಬುಲಕ್ಷ್ಮಿ ಭಾರತೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಭಾರತ ರತ್ನ ಸೇರಿ ಹಲವು ಅತ್ಯುನ್ನತ ಪ್ರಶಸ್ತಿಗಳು ಆಕೆಗೆ ಲಭಿಸಿತ್ತು. ಸೆಪ್ಟೆಂಬರ್ 16, 1916 ರಂದು ಹುಟ್ಟಿದ ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ ತಮ್ಮ 88ನೇ ವಯಸ್ಸಿನಲ್ಲಿ ಡಿಸೆಂಬರ್ 11, 2004ರಂದು ನಿಧನರಾಗಿದ್ದರು. ಆದರೆ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ.