ರಶ್ಮಿಕಾ ಮಂದಣ್ಣ ನಟನೆಯ ಎರಡು ಸಿನಿಮಾಗಳು ಒಂದರ ಹಿಂದೆ ಒಂದು ಬಿಡುಗಡೆಗೆ ಸಜ್ಜಾಗಿದೆ. ಪತಿ ವಿಜಯ್ ದೇವರಕೊಂಡ ಜೊತೆ 'ರಣಬಾಲಿ' ಚಿತ್ರದಲ್ಲಿ ಕೊಡಗಿನ ಚೆಲುವೆ ನಟಿಸಿದ್ದಾರೆ. ಅಕ್ಟೋಬರ್ 16ಕ್ಕೆ ಈ ಐತಿಹಾಸಿಕ ಕಥಾಹಂದರದ ಸಿನಿಮಾ ತೆರೆಗೆ ಬರಲಿದೆ. ಇನ್ನು ನವೆಂಬರ್ ಕೊನೆ ವಾರದಲ್ಲಿ 'ಮೈಸಾ' ಅವತಾರದಲ್ಲಿ ರಶ್ಮಿಕಾ ಅಬ್ಬರಿಸೋಕೆ ಬರ್ತಿದ್ದಾರೆ.
ರವೀಂದ್ರ ಪುಳ್ಳೆ ನಿರ್ದೇಶನದ ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಗೋಂಡ್ ಬುಡಕಟ್ಟು ಮಹಿಳೆಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಒಬ್ಬ ಧೈರ್ಯಶಾಲಿ ಹೆಣ್ಣುಮಗಳಾಗಿ ದರ್ಶನ ಕೊಟ್ಟಿದ್ದಾರೆ. ಭರ್ಜರಿ ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ರಶ್ಮಿಕಾ ರೋಷಾವೇಷ ನೋಡಬಹುದು. ನೀರಿನ ಆಳದಲ್ಲಿ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು ಸಾಕಷ್ಟು ತರಬೇತಿ ಪಡೆದು ಆಕೆ ನಟಸಿದ್ದಾರೆ. ಅನ್‌ಫಾರ್ಮುಲಾ ಫಿಲ್ಮ್ಸ್ ಸಂಸ್ಥೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ತರ್ತಿದೆ. ಕನ್ನಡಕ್ಕೂ ಡಬ್ ಆಗಿ 'ಮೈಸಾ' ಸಿನಿಮಾ ಬಿಡುಗಡೆ ಆಗಲಿದೆ.
ಸದ್ಯ 'ಮೈಸಾ' ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. "ನಾನು ಸುಸ್ತಾಗಿದ್ದೇನೆ, ನಾನು ನಿಂತುಬಿಟ್ಟಿದ್ದೇನೆ, ನಾನು ಸೋತಿದ್ದೇನೆ" ಎನ್ನುವ ಮೈಸಾ ರಶ್ಮಿಕಾ ಹಿನ್ನೆಲೆ ಧ್ವನಿಯೊಂದಿಗೆ ಹೊಸ ಟೀಸರ್ ಶುರುವಾಗುತ್ತದೆ. ನಿಧಾನವಾಗಿ ಆಕೆಯ ಹೋರಾಟದ ಜಗತ್ತಿನ್ನು ಪರಿಚಯಿಸಲಾಗಿದೆ. ಒಂಟಿ ಮಹಿಳೆಯಾಗಿ ಆಕೆಯ ಹೋರಾಟವನ್ನು ಬಹಳ ರೋಷಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
ಬೈಕ್ ರೈಡಿಂಗ್ ಹಾಗೂ ಆಕ್ಷನ್ ತರಬೇತಿ ಪಡೆದು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಮೈಸಾ ಪಾತ್ರಕ್ಕಾಗಿ ತಮ್ಮ ತನು-ಮನ ಅರ್ಪಿಸಿಕೊಂಡಿರುವುದು ಗೊತ್ತಾಗುತ್ತಿದೆ. ರಾವ್ ರಮೇಶ್, ರಾಹುಲ್ ರವೀಂದ್ರನ್, ಸಮುದ್ರಕನಿ, ಈಶ್ವರಿ ರಾವ್, ಗುರು ಸೋಮಸುಂದರಂ ಚಿತ್ರದ ತಾರಾಗಣದಲ್ಲಿದ್ದಾರೆ. ಕನ್ನಡ ನಟ ತಾರಕ್ ಪೊನ್ನಪ್ಪ ನೆಗೆಟಿವ್ ಪಾತ್ರದಲ್ಲಿ ರಶ್ಮಿಕಾಗೆ ಸವಾಲು ಹಾಕಿದ್ದಾರೆ.