ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕನ್ನಡ ನಟಿ ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಮದುವೆ ಬಳಿಕ ಕೂಡ ಸಿನಿಮಾ ಕೆಲಸಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ. 'ರಣಬಾಲಿ' ಸಿನಿಮಾ ಮೂಲಕ ಜೋಡಿ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದೆ. ಅಕ್ಟೋಬರ್ 16ರಂದು ಸಿನಿಮಾ ತೆರೆಗೆ ಬರಲಿದೆ. ಚಿತ್ರದ ಪ್ರಮೋಷನ್ ಜೋರಾಗಿದೆ

'ರಣಬಾಲಿ' ಸಿನಿಮಾ ಮಾತಾಡ್ತಾ ಮಾತಾಡ್ತಾ ಮದುವೆ ಬಳಿಕ ತಮ್ಮ ಹೊಸ ಜೀವನ ಹೇಗಿದೆ ಎನ್ನುವುದನ್ನು ದಂಪತಿ ಹಂಚಿಕೊಂಡಿದ್ದಾರೆ. ಅಂದಹಾಗಿ ಇದು ಜೋಡಿಯ ಮೂರನೇ ಸಿನಿಮಾ. 'ಗೀತಗೋವಿಂದಂ' ಹಾಗೂ ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಹಿಂದೆ ನಟಿಸಿದ್ದರು. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಬ್ರಿಟೀಷರ ವಿರುದ್ಧ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಥೆ ಚಿತ್ರದಲ್ಲಿದೆ. ರಾಹುಲ್ ಸಂಕೃತ್ಯನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ವಿಜಯ್ ಹಾಗೂ ರಶ್ಮಿಕಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮದುವೆ ಬಳಿಕ ಏನೆಲ್ಲಾ ಬದಲಾಯ್ತು ಎನ್ನುವುದನ್ನು ವಿವರಿಸಿದ್ದಾರೆ. ರಶ್ಮಿಕಾ ನನ್ನನ್ನು ಬಹಳ ಚೆನ್ನಾಗಿ ಇಮಿಟೇಟ್ ಮಾಡುತ್ತಾಳೆ ಎಂದು ವಿಜಯ್ ಹೇಳಿದ್ದಾರೆ. ಮನೆಯಲ್ಲಿ ವಿಜಯ್ ಹೇಗಿರ್ತಾರೆ ಎಂದು ನಿರೂಪಕಿ ಸುಮಾ ಕೇಳಿದ್ದಾರೆ. ಅದನ್ನು ರಶ್ಮಿಕಾ ತಮಾಷೆಯಾಗಿ ನಟಿಸಿ ತೋರಿಸಿದ್ದಾರೆ.

ಬೆಡ್‌ರೂಮ್ ಫಸ್ಟ್‌ ಫ್ಲೋರ್‌ನಲ್ಲಿದೆ. ಬೆಳಗ್ಗೆ ಎದ್ದು ಕೂಡಲೇ ಹೊಟ್ಟೆ ಕೆರೆದುಕೊಂಡು ವಿಜಯ್ ಕೆಳಗೆ ಹಾಲ್‌ಗೆ ಬರ್ತಾರೆ. ತಿಂಡಿ ಎಲ್ಲಿ ಅಂತ ಹೊಟ್ಟೆ ಕೆರೆದುಕೊಂಡೇ ಕೇಳ್ತಾರೆ. ಬಳಿಕ ನಾನು "ಬೇಬಿ.. ಬೇಬಿ" ಎಂದು ಕರೆದ್ರೆ, ಹ್ಞಾ ಎನ್ನುತ್ತಾರೆ. 'ಲೇಯ್' ಎಂದು ಜೋರಾಗಿ ಕೂಗುತ್ತಿದ್ದಂತೆ ಎಚ್ಚೆದ್ದುಕೊಂಡಂತೆ ಪ್ರತಿಕ್ರಿಯಿಸುತ್ತಾರೆ ಎಂದು ರಶ್ಮಿಕಾ ತಮಾಷೆ ಮಾಡಿ ನಕ್ಕಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ.

ರಶ್ಮಿಕಾ ಪತಿಯನ್ನು ಬೇಬಿ ಎಂದು ಕರೆಯುತ್ತಾರೆ. ಇನ್ನು ಪತ್ನಿಯನ್ನು ವಿಜಯ್ "ರಶಿ" ಎಂದು ಕರೆಯುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ನಟನೆಯ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. ಹಾಗಾಗಿ 'ರಣಬಾಲಿ' ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.