ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್‌ವೀರ್ ಸಿಂಗ್ ದಂಪತಿ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಪ್ತರು, ಅಭಿಮಾನಿಗಳು ಅಭಿನಂದನೆ ಮಹಾಪೂರವನ್ನು ಹರಿಸುತ್ತಿದ್ದಾರೆ. 2018ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ 2024ರಲ್ಲಿ ಮಗಳು ದುವಾಗೆ ಜನ್ಮ ನೀಡಿದ್ದರು. ಈ ಮತ್ತೊಮ್ಮೆ ಹೆಣ್ಣು ಮಗು ಜನಿಸಿದೆ.

ರಣ್‌ವೀರ್ ಹಾಗೂ ದೀಪಿಕಾ ತಮ್ಮ ಎರಡನೇ ಮಗಳ ಆಗಮನವನ್ನು ಸ್ವಾಗತಿಸುತ್ತಾ, ಮಗಳ ಪುಟ್ಟ ಪಾದದ ಗುರುತಿನ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಿನ್ನೆ(ಸೆಪ್ಟೆಂಬರ್ 18) ತುಂಬು ಗರ್ಭಿಣಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ರಣ್‌ವೀರ್ ತಮ್ಮ ಪೋಷಕರು ಹಾಗೂ ಪತ್ನಿ ದೀಪಿಕಾ ಜೊತೆ ದೇವರ ದರ್ಶನ ಪಡೆದಿದ್ದರು. ವಾರದ ಹಿಂದೆ ಬೇಬಿ ಬಂಪ್ ಫೋಟೊಶೂಟ್ ಮಾಡಿ ದೀಪಿಕಾ ಫೋಟೊಗಳನ್ನು ಹಂಚಿಕೊಂಡಿದ್ದರು. ಮಗಳು ದುವಾ ಹಾಗೂ ರಣ್‌ವೀರ್ ಜೊತೆ ಡಿಪ್ಪಿ ಪೋಸ್ ನೀಡಿದ್ದರು.

ವಿಶೇಷ ಅಂದ್ರೆ ಮಗಳು ದುವಾ ಹುಟ್ಟುವ ಎರಡು ದಿನ ಮುನ್ನ ದೀಪ್‌ವೀರ್ ದಂಪತಿ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈಗ ಅದು ಮತ್ತೆ ಪುನರಾವರ್ತನೆಯಾಗಿದೆ ಎಂದು ಅಭಿಮಾನಿಗಳ ಕಾಮೆಂಟ್ ಮಾಡುತ್ತಿದ್ದಾರೆ. 'ರಾಮ್‌ಲೀಲಾ' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಅದಕ್ಕೂ ಮುನ್ನ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರು. 'ಬಾಜಿರಾವ್ ಮಸ್ತಾನಿ' ಹಾಗೂ 'ಪದ್ಮಾವತ್' ಸಿನಿಮಾಗಳಲ್ಲಿ ಕೂಡ ಇಬ್ಬರೂ ನಟಿಸಿದ್ದರು.

ಎರಡನೇ ಮಗುವನ್ನು ಸ್ವಾಗತಿಸಿರುವ ಜೋಡಿಗೆ ನಟಿಯರಾದ ಕೃತಿ ಸನೂನ್, ಕೃತಿ ಕರಬಂಧ, ಗಾಯಕಿ ಶ್ರೇಯಾ ಘೋಷಾಲ್, ಆಲಿಯಾ ಭಟ್ ಸೇರಿದಂತೆ ಹಲವು ತಾರೆಯರು ಅಭಿನಂದನೆ ತಿಳಿಸಿದ್ದಾರೆ. ಕನ್ನಡ ನಟಿಯರಾದ ಅದಿತಿ ಪ್ರಭುದೇವ ಹಾಗೂ ಶ್ವೇತಾ ಚೆಂಗಪ್ಪ ಕೂಡ ಕಾಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.