ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ 'ರಾಮಾಯಣ' ಸಿನಿಮಾ ಬಿಡುಗಡೆ ಸಿದ್ಧವಾಗ್ತಿದೆ. ಸದ್ಯ ಗಣೇಶ ಹಬ್ಬದ ಸಂಭ್ರಮದಲ್ಲಿ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿ ಸದ್ದು ಮಾಡ್ತಿದೆ. 'ಜೈ ಜೈ ರಾಮ್' ಎಂದು ಶುರುವಾಗುವ ಲಿರಿಕಲ್ ವೀಡಿಯೋ ಸಾಂಗ್ ಗಮನ ಸೆಳೆಯುತ್ತಿದೆ. ಎ. ಆರ್ ರಹಮಾನ್ ಸಂಗೀತದ ಗೀತೆಯನ್ನು ಶ್ರೇಯಾ ಘೋಷಾಲ್, ಅರ್ಜಿತ್ ಸಿಂಗ್ ಹಾಡಿದ್ದಾರೆ.

ಶಿವಧನಸ್ಸು ಮುರಿದು ಶ್ರೀರಾಮ, ಸೀತೆಯನ್ನು ಮದುವೆಯಾಗಿ ಅಯೋಧ್ಯೆ ಕರೆದುಕೊಂಡು ಬರುವ ಸನ್ನಿವೇಶದಲ್ಲಿ ಈ ಹಾಡು ಮೂಡಿ ಬಂದಿದೆ. ಬಹಳ ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ. ಶ್ರೀರಾಮ- ಸೀತಾಮಾತೆಯಾಗಿ ರಣ್‌ಬೀರ್- ಸಾಯಿಪಲ್ಲವಿ ಮೋಡಿ ಮಾಡಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಒಂದು ಟೀಸರ್ ಹಾಗೂ ಟ್ರೈಲರ್ ಬಂದು ಹಿಟ್ ಆಗಿದೆ. ಮುಂದೆ ಇನ್ನೆರಡು ಸಾಂಗ್ ಹಾಗೂ ಟ್ರೈಲರ್ ರಿಲೀಸ್ ಪ್ರಯತ್ನ ನಡೀತಿದೆ.

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಹಾಗಾಗಿ 'ರಾಮಾಯಣ' ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ರಾವಣನಾಗಿ ಯಶ್ ಅಬ್ಬರಿಸೋಕೆ ಬರ್ತಿದ್ದಾರೆ. ಎ. ಆರ್ ರಹಮಾನ್ ಜೊತೆಗೆ ಹ್ಯಾನ್ಸ್ ಝಿಮ್ಮರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್ ಅಂಗಳದಲ್ಲಿ ಚಿತ್ರವನ್ನು ದೊಡ್ಡದಾಗಿ ಬಿಡುಗಡೆ ಮಾಡುವ ಪ್ರಯತ್ನದಲ್ಲಿದೆ ಚಿತ್ರತಂಡ. ಸೋನಿ ಪಿಕ್ಚರ್ಸ್ ಸಂಸ್ಥೆ ಓವರ್‌ಸೀಸ್ ರೈಟ್ಸ್ ಕೊಂಡುಕೊಂಡಿದೆ.

ದಶರಥನಾಗಿ ಅರುಣ್ ಗೋವಿಲ್, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್, ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್, ಮಂಡೋದರಿಯಾಗಿ ಕಾಜಲ್ ಅಗರ್‌ವಾಲ್ ಚಿತ್ರದಲ್ಲಿ ನಟಿಸಿದ್ದಾರೆ. ಎರಡು ಭಾಗಗಳಾಗಿ ಚಿತ್ರವನ್ನು ತೆರೆಗೆ ತರಲಾಗ್ತಿದೆ. ಮುಂದಿನ ವರ್ಷ ದೀಪಾವಳಿಗೆ ಎರಡನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ.