ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರ್ತಿದೆ. 2028ರಲ್ಲಿ ಸೀಕ್ವೆಲ್ ಬಿಡುಗಡೆ ಆಗಲಿದೆ. ಮೂರನೇ ಭಾಗ ಕೂಡ ಬರಬಹುದು ಎಂದು ರಣ್ಬೀರ್ ಹೇಳಿದ್ದು ಅದನ್ನು ಕೇಳಿ ಪಕ್ಕದಲ್ಲೇ ಇದ್ದ ಯಶ್ ಶಾಕ್ ಆಗಿರುವಂತೆ ಕಾಣ್ತಿದೆ.

ಮೊದಲ ಭಾಗದಲ್ಲಿ ಸೀತಾಪಹರಣದವರೆಗಿನ ಕಥೆಯನ್ನು ಮಾತ್ರ ಹೇಳಲಾಗ್ತಿದೆ. ಹಾಗಾಗಿ ಯಶ್ ಹಾಗೂ ರಣ್‌ಬೀರ್ ಒಟ್ಟಿಗೆ ಇನ್ನು ತೆರೆಹಂಚಿಕೊಂಡಿಲ್ಲ. ಮೊದಲ ಭಾಗ ಸಿನಿಮಾ ಬಿಡುಗಡೆಗೂ ಮುನ್ನ ಎರಡನೇ ಭಾಗದ ಒಂದಷ್ಟು ಚಿತ್ರೀಕರಣ ನಡೆದಿದೆ. ಲಂಕೆಯ ಸನ್ನಿವೇಶಗಳನ್ನು ಮಾತ್ರ ಚಿತ್ರೀಕರಿಸಬೇಕಿದೆ. ಇದೆಲ್ಲದರ ನಡುವೆ 'ರಾಮಾಯಣ' ಮೂರನೇ ಭಾಗದ ಬಗ್ಗೆ ಚರ್ಚೆ ಶುರುವಾಗಿದೆ.

ಗ್ಲೋಬಲ್ ಮಟ್ಟದಲ್ಲಿ 'ರಾಮಾಯಣ' ಸಿನಿಮಾ ಬಿಡುಗಡೆ ಆಗ್ತಿದೆ. ಸೋನಿ ಪಿಕ್ಚರ್ಸ್ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ವಿತರಣೆ ಮಾಡ್ತಿದೆ. ಈಗಾಗಲೇ ಅಮೆರಿಕಾದಲ್ಲಿ ಪ್ರೀಮಿಯರ್ ಶೋ ನಡೆದಿದೆ. ಸದ್ಯ ಲಂಡನ್‌ನಲ್ಲಿ ಪ್ರೀಮಿಯರ್ ಶೋ ನಡೀತಿದೆ. ರಣ್‌ಬೀರ್, ಯಶ್, ಸಾಯಿಪಲ್ಲವಿ, ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಅಲ್ಲಿ ಬೀಡುಬಿಟ್ಟಿದ್ದಾರೆ. Review Nation ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಂಡ ಭಾಗಿ ಆಗಿದೆ. ಇದೇ ವೇಳೆ 'ರಾಮಾಯಣ'- 3 ಬಗ್ಗೆ ರಣ್ಬೀರ್ ಬಾಯ್ತಪ್ಪಿ ಹೇಳಿಬಿಟ್ಟಿದ್ದಾರೆ. ಅಯ್ಯೋ ಯಾಕೆ ಹೇಳಿಬಿಟ್ಟೆ ಎನ್ನುವಂತೆ ಪಕ್ಕದಲ್ಲೇ ಇದ್ದ ಯಶ್ ಪ್ರತಿಕ್ರಿಯೆ ನೀಡಿರುವುದನ್ನು ಕೆಲವರು ವೀಡಿಯೋ ವೈರಲ್ ಮಾಡ್ತಿದ್ದಾರೆ.

ಇದೇ ವಿಚಾರವಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಮಾತನಾಡಿದ್ದಾರೆ. ಎರಡು ಸಿನಿಮಾಗಳಿಗೆ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತೆ ಎನ್ನುವುದನ್ನು ನೋಡೋಣ. ಮುಂದೆ ಸಾಧ್ಯವಾದರೆ ಮತ್ತೆ ಸಿನಿಮಾ ಮಾಡಬಹುದು ಎಂದಿದ್ದಾರೆ. ಹಾಗಾಗಿ 'ರಾಮಾಯಣ'- 3 ಚಿತ್ರಕ್ಕೂ ಪ್ರಯತ್ನ ನಡಿತಿದ್ಯಾ ಎನ್ನುವ ಕುತೂಹಲ ಮೂಡಿದೆ.

ವಾಲ್ಮೀಕಿ ರಾಮಾಯಣದ ಏಳನೇ ಮತ್ತು ಕೊನೆಯ ಕಾಂಡವೇ ಉತ್ತರ ರಾಮಾಯಣ. ಸೀತಾ- ಲಕ್ಷ್ಮಣ ಸಮೇತ ವನವಾಸ ಮುಗಿಸಿ ರಾವಣ ವಧೆ ಮಾಡಿ ಮತ್ತೆ ಶ್ರೀರಾಮ ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾಗುವುದು, ಬಳಿಕ ಸೀತಾ ಮಾತೆ ಪರಿತ್ಯಾಗ ಹಾಗೂ ವಾಲ್ಮೀಕಿ ಆಶ್ರಮದಲ್ಲಿ ವಾಸ. ಲವ-ಕುಶ ಜನನ ಹೀಗೆ ಕಥೆ ಸಾಗುತ್ತದೆ. ಈ ಕಥೆಯನ್ನು ಕೂಡ ನಮಿತ್ ಮಲ್ಹೋತ್ರಾ ತೆರೆಗೆ ತರ್ತಾರಾ ಕಾದು ನೋಡಬೇಕಿದೆ.

ಹನುಮಂತ ಹೋಗಿ ಲಂಕಾ ದಹನ ಮಾಡುವ ಸನ್ನಿವೇಶವನ್ನೇ ಎರಡನೇ ಭಾಗದ ಕ್ಲೈಮ್ಯಾಕ್ಸ್ ಮಾಡಬಹುದು. ಇನ್ನುಳಿದ ಕಥೆಯನ್ನು ಮೂರನೇ ಭಾಗದಲ್ಲಿ ಹೇಳುವ ಸಾಧ್ಯತೆಯಿದೆ ಎಂದು ಕೆಲವರು ಭಾವಿಸುತ್ತಿದ್ದಾರೆ. ಹನುಮಂತನನ್ನ ರಾಮ-ಲಕ್ಷ್ಮಣ ಭೇಟಿ ಮಾಡುವುದು, ವಾಲಿ-ಸುಗ್ರೀವ ಯುದ್ಧ, ಬಳಿಕ ಹನುಮಂತ ಲಂಕೆಗೆ ಹೋಗಿ ಸೀತೆಯನ್ನು ನೋಡಿ ಬರುವ ಕಥೆಯನ್ನು ಎರಡನೇ ಭಾಗದಲ್ಲಿ ಹೇಳ್ತಾರಾ ಎನ್ನುವ ಕುತೂಹಲ ಮೂಡಿದೆ. ಮೊದಲ ಭಾಗ ಸಿನಿಮಾ ಫಲಿತಾಂಶದ ಬಳಿಕ ಮುಂದೇನು ಎನ್ನುವುದು ಗೊತ್ತಾಗಲಿದೆ.