ಚಿತ್ರ: ರಾಮಾಯಣ: ಭಾಗ- 1
ನಿರ್ದೇಶನ: ನಿತೇಶ್ ತಿವಾರಿ
ಕಲಾವಿದರು: ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ರಕುಲ್, ಅರುಣ್ ಗೋವಿಲ್, ವಿವೇಕ್ ಒಬೆರಾಯ್ ಮುಂತಾದವರು.
ಸಂಗೀತ: ಹ್ಯಾನ್ಸ್ ಝಿಮ್ಮರ್ ಹಾಗೂ ಎ. ಆರ್. ರೆಹಮಾನ್
ನಿರ್ಮಾಣ; ನಮಿತ್ ಮಲ್ಹೋತ್ರಾ ಹಾಗೂ ಯಶ್
ಸಿನಿರಸಿಕರ ಕುತೂಹಲಕ್ಕೆ ತೆರೆ ಬಿದ್ದಿದೆ. ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ದೃಶ್ಯಕಾವ್ಯ ತೆರೆಮೇಲೆ ಅನಾವರಣವಾಗಿದೆ. ಭಾರತದ ಹಾಗೂ ಅಂತರಾಷ್ಟ್ರೀಯಮಟ್ಟದ ಖ್ಯಾತ ತಂತ್ರಜ್ಞರು, ಭಾರತದ ಘಟಾನುಘಟಿ ಕಲಾವಿದರು ಸೇರಿ ಕಟ್ಟಿಕೊಟ್ಟಿರುವ ಸಿನಿಮಾ ಇದು. 2D, 3D ಸೇರಿ ಐಮ್ಯಾಕ್ಸ್ ವರ್ಷನ್ನಲ್ಲಿ ಕೂಡ ಸಿನಿಮಾ ಪ್ರದರ್ಶನವಾಗ್ತಿದೆ.
ಈಗಾಗಲೇ ಸಾಕಷ್ಟು ಬಾರಿ ಕೇಳಿರುವ ಓದಿರುವ ನಾಟಕ, ಸಿನಿಮಾ, ಧಾರಾವಾಹಿಯಲ್ಲಿ ನೋಡಿರುವ 'ರಾಮಾಯಣ' ಕಾವ್ಯವನ್ನು ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ಕಟ್ಟಿಕೊಡಲಾಗಿದೆ. ವಾಲ್ಮೀಕಿ ರಾಮಾಯಣವನ್ನೇ ಆಧಾರವಾಗಿಟ್ಟುಕೊಂಡು ಒಂದಷ್ಟು ಸಿನಿಮ್ಯಾಟಿಕ್ ಲಿಬರ್ಟಿ ತಗೊಂಡು ಈ ಬಾರಿ ಕಥೆ ಹೇಳಲಾಗಿದೆ. ಎಲ್ಲರಿಗೂ ಗೊತ್ತಿರುವ ಒಂದಷ್ಟು ಸನ್ನಿವೇಶಗಳು, ಅದರ ಜೊತೆ ಹೊಸದಾಗಿ ಮತ್ತಷ್ಟು ಸನ್ನಿವೇಶಗಳನ್ನು ಸೇರಿಸಿ ನಿತೇಶ್ ತಿವಾರಿ ಮತ್ತವರ ತಂಡ ದೃಶ್ಯಕಾವ್ಯ ತೆರೆಗೆ ತಂದಿದೆ.
ಎರಡು ಭಾಗಗಳಾಗಿ 'ರಾಮಾಯಣ' ಚಿತ್ರವನ್ನು ಮಾಡುವ ಪ್ರಯತ್ನ ಮಾಡಿದ್ದೇಕೆ ? ಸಾವಿರಾರು ಕೋಟಿ ರೂ. ಬಜೆಟ್ ಸಿನಿಮಾದಲ್ಲಿ ಹೊಸದೇನಿದೆ ? ರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಇಷ್ಟವಾಗ್ತಾರಾ ? ಇಲ್ಲಿದೆ ರಿವ್ಯೂ ರಿಪೋರ್ಟ್.
ಕಥೆ
'ರಾಮಾಯಣ' ಕಥೆ ಏನು ಎನ್ನುವುದನ್ನು ಹೊಸದಾಗಿ ಹೇಳಬೇಕಿಲ್ಲ. ಈ ಚಿತ್ರದಲ್ಲಿ ಯಾವ ಯಾವ ಎಪಿಸೋಡ್ಗಳನ್ನು ತೆಗೆದುಕೊಂಡಿದ್ದಾರೆ ಎನ್ನುವುದು ಮುಖ್ಯ. ದೇವತೆಗಳು ಹಾಗೂ ಅಸುರರ ನಡುವಿನ ಯುದ್ಧದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಬಳಿಕ ರಾವಣನ ಪರಿಚಯ, ಹಿನ್ನೆಲೆ, ಆತ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ವರ ಪಡೆಯುವುದು, ಅಟ್ಟಹಾಸ ಮೆರೆದು ಮೂರು ಲೋಕಗಳ ಅಧಿಪತಿಯಾಗಿ ಮೆರೆಯುವುದು. ಬಳಿಕ ದಶರಥನಿಗೆ ನಾಲ್ವರು ಮಕ್ಕಳು ಜನಿಸುವುದು. ಗುರುಕುಲದಲ್ಲಿ ವಿದ್ಯೆಗಳನ್ನು ಕಲಿಯುವುದು, ವಿಶ್ವಾಮಿತ್ರರ ಜೊತೆ ಹೋಗಿ ಮಾರಿಚ ಮತ್ತು ಸುಬಾಹು ವಧೆ. ಮುಂದೆ ಸೀತಾ ಸ್ವಯಂವರ, ಮದುವೆ, ರಾಮ-ಪರಶುರಾಮನ ಮುಖಾಮುಖಿ, ರಾಮನ ಪಟ್ಟಾಭಿಷೇಕಕ್ಕೆ ತಯಾರಿ, ತಂದೆಯ ವಚನಕ್ಕೆ ಬೆಲೆ ಕೊಟ್ಟು ಸೀತಾ-ಲಕ್ಷ್ಮಣ ಸಮೇತನಾಗಿ ರಾಮ ವನವಾಸಕ್ಕೆ ಹೋಗುವ ಕಥೆ ಫಸ್ಟ್ ಹಾಫ್ನಲ್ಲಿದೆ.
ಸೆಕೆಂಡ್ ಹಾಫ್ನಲ್ಲಿ ರಾವಣ ಹಾಗೂ ವಿದ್ಯುಜ್ಜಿಹ್ವ(ಶೂರ್ಪನಖಿ ಪತಿ) ನಡುವಿನ ಯುದ್ಧ. ರಾಮನ ಮೇಲೆ ಮೋಹಗೊಂಡ ಶೂಪರ್ನಖಿ ಮೂಗನ್ನು ಲಕ್ಷ್ಮಣ ಕತ್ತರಿಸುವುದು. ಆಕೆಯ ಸೈನ್ಯದೊಂದಿಗೆ ರಾಮನ ಯುದ್ಧ. ತಂಗಿಗೆ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಸೀತೆಯನ್ನು ರಾವಣ ಅಪಹರಿಸುವುದು. ಈ ಹಾದಿಯಲ್ಲಿ ರಾವಣ ಹಾಗೂ ಜಟಾಯು ನಡುವಿನ ಕಾಳಗ. ಕೊನೆಗೆ ರಾವಣನನ್ನು ಕೊಂದು ಸೀತೆಯನ್ನು ಮರಳಿ ಕರೆತರುವುದಾಗಿ ರಾಮ ಶಪಥ ಮಾಡುವುದರೊಂದಿಗೆ 'ರಾಮಾಯಣ' ಮೊದಲ ಭಾಗ ಸಿನಿಮಾ ಮುಕ್ತಾಯವಾಗುತ್ತದೆ.
ಸಿನಿಮಾ ಹೇಗಿದೆ ?
ಕಥೆ ಗೊತ್ತಿರುವುದರಿಂದ ಅದರ ಬಗ್ಗೆ ಹೆಚ್ಚು ಚರ್ಚೆ ಅವಶ್ಯಕತೆ ಇಲ್ಲ. ಚಿತ್ರಕಥೆ ಹಾಗೂ ಅದನ್ನು ಹೇಗೆ ಬೆಳ್ಳಿಪರದೆಗೆ ತಂದಿದ್ದಾರೆ ಎನ್ನುವುದು ಮಾತ್ರ ಇಲ್ಲಿ ಮುಖ್ಯವಾಗುತ್ತದೆ. 'ಆದಿಪುರುಷ್' ರೀತಿ ಏನೋ ಮಾಡಲು ಹೋಗಿ ನಿತೇಶ್ ತಿವಾರಿ ಎಡವಟ್ಟು ಮಾಡಿಲ್ಲ ಎನ್ನುವುದು ಸಮಾಧಾನದ ಸಂಗತಿ. ವಾಲ್ಮೀಕಿ ರಾಮಾಯಣ ಬಿಟ್ಟು ಬೇರೆ ವರ್ಷನ್ ರಾಮಾಯಣ ಕಾವ್ಯಗಳಿಂದ ಪ್ರೇರಣೆಗೊಂಡು ಕೆಲ ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದಾರೆ. ರಾವಣನಾಗಿ ಯಶ್ ಎಂಟ್ರಿ ಜಬರ್ದಸ್ತ್ ಆಗಿದೆ.
ಶ್ರೀರಾಮನಾಗಿ ರಣ್ಬೀರ್ ಕಪೂರ್ ಇಷ್ಟವಾಗುತ್ತಾರೆ. ಆದರೆ ರಾವಣ ಯಶ್ ಆರ್ಭಟದ ಮುಂದೆ ಸಪ್ಪೆ ಎನಿಸಿಬಿಡುತ್ತಾರೆ. ಶ್ರೀರಾಮನ ಪಾತ್ರ ಬಹಳ ಸೌಮ್ಯವಾಗಿರುವುದರಿಂದ ಮಾಸ್ ರಾವಣನ ಮುಂದೆ ಆ ರೀತಿ ಅನಿಸಬಹುದು. ಇಡೀ ಸಿನಿಮಾ ವಿಷ್ಯುವಲ್ ಟ್ರೀಟ್.. ಇಡೀ ಸಿನಿಮಾ ಶಕ್ತಿಯೇ ಅದು. ಮೊದಲಿನಿಂದ ಇದು ವಿಷ್ಯುವಲಿ ಅದ್ಭುತ ಸಿನಿಮಾ ಎಂದು ಚಿತ್ರತಂಡ ಹೇಳ್ತಾ ಬರ್ತಿತ್ತು. ಅದು ಯಾಕೆ ಎನ್ನುವುದು ಪ್ರತಿ ಫ್ರೇಮ್ನಲ್ಲಿ ಗೊತ್ತಾಗುತ್ತೆ. ಟೀಸರ್ ಹಾಗೂ ಟ್ರೈಲರ್ನಲ್ಲಿದ್ದ ತಪ್ಪುಗಳನ್ನು ಸರಿಪಡಿಸಿಕೊಂಡು ಬಹಳ ಅದ್ಭುತವಾಗಿ ಗ್ರಾಫಿಕ್ಸ್ ವರ್ಕ್ ಮಾಡಿದ್ದಾರೆ.
ಹೆಚ್ಚು ಸೆಟ್ ಇಲ್ಲದೇ ಗ್ರೀನ್ ಮ್ಯಾಟ್ನಲ್ಲೇ 'ರಾಮಾಯಣ' ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಬಳಿಕ ಗ್ರಾಫಿಕ್ಸ್ನಲ್ಲಿ ಎಲ್ಲವನ್ನು ತುಂಬಿದ್ದಾರೆ. ಅರಮನೆ, ಕಾಡು, ಬೆಟ್ಟ, ಹಿಮ ಪರ್ವತ ಹೀಗೆ ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ. ಕಣ್ಣಿಗೆ ಅತ್ಯದ್ಭುತ ಅನುಭವ ನೀಡುತ್ತದೆ. ಇನ್ನು ತ್ರೀಡಿ ಕನ್ನಡಕದಲ್ಲಿ ಆ ಮಜಾನೇ ಬೇರೆ.. ಸೆಕೆಂಡ್ ಹಾಫ್ಗೆ ಹೋಲಿಸಿದರೆ ಫಸ್ಟ್ ಹಾಫ್ ಕೊಂಚ ಡಲ್ ಎನಿಸುತ್ತದೆ. ಆದ್ರೆ ಸೆಕೆಂಡ್ ಹಾಫ್ ಬೊಂಬಾಟ್ ಅಂತ್ಲೇ ಹೇಳಬೇಕು. ರಾವಣ- ಜಟಾಯು ಕ್ಲೈಮ್ಯಾಕ್ಸ್ ಫೈಟ್ ಸಿಂಪ್ಲಿ ಸೂಪರ್. ಆಕ್ಷನ್ ಎಲಿವೇಷನ್ ಸೀನ್ಸ್ ಹೆಚ್ಚಾಗಿ ಡ್ರಾಮಾ ಕೊಂಚ ಹಿಂದೆ ಬೀಳುತ್ತೆ. ಮಾಸ್ ಪ್ರೇಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಹೀಗೆ ಮಾಡಿರುವುದು ಗೊತ್ತಾಗುತ್ತದೆ.
ಚಿತ್ರದಲ್ಲಿರುವ ಒಂದಷ್ಟು ಸನ್ನಿವೇಶಗಳು ಮುಂದೆ ಚರ್ಚೆ ಹುಟ್ಟುಹಾಕುವ ಸಾಧ್ಯತೆಯಿದೆ. ವಾಲ್ಮೀಕಿ ರಾಮಾಯಣದಲ್ಲಿ ಇಲ್ಲದ ಕೆಲ ವಿಚಾರಗಳನ್ನು ತೋರಿಸಲಾಗಿದೆ. ರಾವಣನ ತಾಯಿ ಕೈಕಸಿ ಯುದ್ಧ ಮಾಡುವುದು, ಸೀತೆ ಕತ್ತಿ ಹಿಡಿದು ಯುದ್ಧ ಮಾಡುವಂತಹ ಸನ್ನಿವೇಶ ಸೇರಿದಂತೆ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಇನ್ನು ರಾವಣ ಪರಮ ಶಿವಭಕ್ತ. ಆದರೆ ಚಿತ್ರದಲ್ಲಿ ಆ ಬಗ್ಗೆ ಹೆಚ್ಚು ಪ್ರಸ್ತಾಪವೇ ಇಲ್ಲ.. ರಾಮಾಯಣ ಅಂದ್ರೆ ಬರೀ ದೃಶ್ಯವೈಭವ ಅಲ್ಲ, ಡ್ರಾಮಾ ಹಾಗೂ ಎಮೋಷನ್ ಮಿಸ್ ಆಗಿದೆ. ಯಾವುದೋ ಅದ್ಭುತವನ್ನು ನೋಡಿದಂತೆ ಎವೆ ಇಕ್ಕದೇ ನೋಡುತ್ತಾ ಹೋಗುವುದು ಬಿಟ್ಟರೆ ಆಳವಾಗಿ ಅನುಭವಿಸುವುದು ಏನು ಅಲ್ಲ. ಭಕ್ತಿರಸ ಕೂಡ ಸ್ಫುರಿಸುವುದಿಲ್ಲ.
ಕಲಾವಿದರ ನಟನೆ
ಚಿತ್ರದಲ್ಲಿ ಕಲಾವಿದರ ಆಯ್ಕೆ ಉತ್ತಮವಾಗಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್ ಒಗ್ಗಿಕೊಳ್ಳುತ್ತಾ ಹೋಗುತ್ತಾರೆ. ಎಮೋಷನಲ್ ದೃಶ್ಯಗಳಲ್ಲಿ ಪಾತ್ರವನ್ನು ಆವರಿಸಿಕೊಂಡಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ನಟಿಸಿದ್ದಾರೆ. ಇನ್ನು ರಾವಣನಾಗಿ ಯಶ್ ಆರ್ಭಟ ಬಿಡಿಸಿ ಹೇಳುವುದು ಬೇಕಿಲ್ಲ. ಐದು ಹತ್ತು ನಿಮಿಷ ಮಾತ್ರ ಯಶ್ ಮೊದಲ ಭಾಗದಲ್ಲಿ ಕಾಣಿಸಿಕೊಳ್ತಾರೆ ಎನ್ನುವುದು ಸುಳ್ಳಾಗಿದೆ. ಅರ್ಧ ಸಿನಿಮಾ ರಾವಣನಿಗೆ ಮೀಸಲಾಗಿದೆ. ಸೆಕೆಂಡ್ ಹಾಫ್ನಲ್ಲಿ ದಶಕಂಠನಾಗಿ ಹತ್ತು ಬೇರೆ ಬೇರೆ ಗುಣ ವ್ಯಕ್ತಿತ್ವ ಪ್ರದರ್ಶಿಸುವ ಸನ್ನಿವೇಶ ಇದೆ. ಅಭಿಮಾನಿಗಳಿಗೆ ಇದೊಂದು ಸನ್ನಿವೇಶದಲ್ಲೇ ಪೈಸಾ ವಸೂಲ್ ಆಗಿಬಿಡುತ್ತದೆ. ಆ ದೃಶ್ಯದಲ್ಲಿ ಬೇರೆ ಬೇರೆ ಗೆಟಪ್ಗಳಲ್ಲಿ ಬೇರೆ ಬೇರೆ ಬಾಡಿ ಲಾಂಗ್ವೇಜ್ನಲ್ಲಿ ಯಶ್ ಮಿಂಚಿದ್ದಾರೆ. ಅದು ಬಿಟ್ಟು ಮತ್ತೆರಡು ಗೆಟಪ್ಗಳಲ್ಲಿ ರಾಕಿಂಗ್ ಸ್ಟಾರ್ ಕಾಣಿಸಿಕೊಂಡಿರುವುದು ಬೋನಸ್.
ರಾವಣನಾಗಿ ಯಶ್ ಅಕ್ಷರಶಃ ವಿಜೃಂಭಿಸಿದ್ದಾರೆ. ಆದ್ರೆ 'ಕೆಜಿಎಫ್'- 2 ಚಿತ್ರದ ರಾಕಿಭಾಯ್ ಗಡ್ಡ ಇಲ್ಲೂ ಮುಂದುವರೆದು ಬೇಸರ ಮೂಡಿಸುತ್ತದೆ. ಬೇರೆ ಏನಾದರೂ ಟ್ರೈ ಮಾಡಿದ್ರೆ ಚೆನ್ನಾಗಿತ್ತು ಅನ್ನಿಸದೇ ಇರದು. ಲಕ್ಷ್ಮಣನಾಗಿ ರವಿ ದುಬೆ ಇಷ್ಟವಾಗ್ತಾರೆ. ಆ ಪಾತ್ರಕ್ಕೆ ಕೊಂಚ ಕಾಮಿಡಿ ಟಚ್ ಸಿಕ್ಕಿದೆ. ಇನ್ನು ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ಗೆ ಒಳ್ಳೆ ಅವಕಾಶ. ವಿದ್ಯುಜ್ಜಿಹ್ವನಾಗಿ ವಿವೇಕ್ ಒಬೆರಾಯ್ ನೆನಪಿನಲ್ಲಿ ಉಳಿಯುತ್ತಾರೆ. ಇನ್ನುಳಿದಂತೆ ದಶರಥನಾಗಿ ಅರುಣ್ ಗೋವಿಲ್, ಕೈಕೇಯಿ ಆಗಿ ಲಾರಾ ದತ್ತಾ, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ತಮ್ಮ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ತಾಂತ್ರಿಕವಾಗಿ ರಾಮಾಯಣ
ಚಿತ್ರದ ವಿಷ್ಯುವಲ್ಸ್ ಬಗ್ಗೆ ಎಷ್ಟೇ ಹೇಳಿದ್ರು ಕಮ್ಮಿನೇ. 8 ಆಸ್ಕರ್ ಪ್ರಶಸ್ತಿ ಗೆದ್ದಿರುವ DNEG ಸಂಸ್ಥೆ ಅದ್ಭುತ ಕೈಚಳಕ 'ರಾಮಾಯಣ' ಚಿತ್ರದ ಪ್ಲಸ್ ಪಾಯಿಂಟ್. ಚಿತ್ರಕ್ಕೆ ಒಂದಾದ್ರು ಆಸ್ಕರ್ ಸಿಗುವುದು ಗ್ಯಾರಂಟಿ ಎನ್ನುವಂತಿದೆ. ಪ್ರತಿ ದೃಶ್ಯವನ್ನು ಗ್ರಾಫಿಕ್ಸ್ ಮೂಲಕ ಮೇಲೆತ್ತಿದೆ ಚಿತ್ರತಂಡ. ಭವ್ಯ ಅರಮನೆಗಳು, ಕಾಡು ಅಬ್ಬಬ್ಬಾ ಎಲ್ಲವೂ ಅದ್ಭುತ. ಕಾಡಿನಲ್ಲಿ ಮರಗಳ ಎಲೆಗಳ ಅಲುಗಾಟವೂ ಕಣ್ಣಿಗೆ ಕಟ್ಟಿದಂತಿದೆ. ಇನ್ನು ದೈತ್ಯದೇಹದ ರಾಕ್ಷಸರ ಚಿತ್ರಣವಂತೂ ಹುಬ್ಬೇರಿಸುವಂತಿದೆ. ಐರಾವತ, ಪುಷ್ಪಕ ವಿಮಾನ, ಜಟಾಯು ಪಕ್ಷಿಯ ಸಿಜಿ ಅಂತೂ ವಾಹ್.
ಐರಾವತ ಆನೆಯ ಕಣ್ಣು, ತಲೆಗೆ ಕಟ್ಟಿದ ಪಟ್ಟಿ ಹೀಗೆ ಪ್ರತಿಯೊಂದನ್ನು ಬಹಳ ಡಿಟೈಲ್ಡ್ ಆಗಿ ಗ್ರಾಫಿಕ್ಸ್ನಲ್ಲಿ ರಚಿಸಿದ್ದಾರೆ. ಜಟಾಯು ಪಕ್ಷಿಯ ಕೊಕ್ಕು, ನಾಲಿಗೆ, ಮೂಗಿನ ಹೊಳ್ಳೆ ಹಾಗೂ ಅದರ ಪ್ರತಿ ಪುಕ್ಕದ ಅಲುಗಾಟವನ್ನು ಬಹಳ ಮುತುವರ್ಜಿ ವಹಿಸಿ ಸಿಜಿಯಲ್ಲಿ ಕ್ರಿಯೇಟ್ ಮಾಡಿರುವುದು ಅಚ್ಚರಿಯೇ ಸರಿ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೆಲವೆಡೆ ಇದೇ ದೃಶ್ಯವೈಭವ ಅತಿ ಎನಿಸಿಬಿಡುತ್ತದೆ. ತಂತ್ರಜ್ಞಾನ ಕಥೆಗೆ ಪೂರಕವಾಗಿರಬೇಕು, ಕಥೆಯನ್ನು ಮೀರುವಂತಿರಬಾರದು ಅಲ್ಲವೇ. ಇನ್ನು ಪಂಕಜ್ ಕುಮಾರ್ ಹಾಗೂ ಮಹೇಶ್ ಲಿಮಾಯೆ ಛಾಯಾಗ್ರಹಣ ಸೊಗಸಾಗಿದೆ. ಕೇರಳದ ಚಾಲ್ಕುಡಿ ಫಾಲ್ಸ್ ಸೇರಿದಂತೆ ಒಂದಷ್ಟು ಲೋಕೇಶನ್ಗಳನ್ನು ಹಿನ್ನೆಲೆಯಲ್ಲಿ ಬಳಸಿಕೊಂಡಿದ್ದಾರೆ.
ಹ್ಯಾನ್ಸ್ ಝಿಮ್ಮರ್ ಹಾಗೂ ಎ. ಆರ್. ರೆಹಮಾನ್ ಸಂಗೀತ ಚಿತ್ರಕ್ಕೆ ಬಲ ತುಂಬಿದೆ. ಒಂದೆರಡು ಹಾಡು ಇಷ್ಟವಾಗುತ್ತದೆ. ಶ್ರೀಧರ್ ರಾಘವನ್ ಜೊತೆ ಸೇರಿ ನಿತೇಶ್ ತಿವಾರಿ ಚಿತ್ರಕಥೆ ಬರೆದುಕೊಂಡಿದ್ದಾರೆ. ಕಥೆ ಕೇಳಿದ್ದನ್ನೆಲ್ಲಾ ಕೊಟ್ಟು ನಮಿತ್ ಮಲ್ಹೋತ್ರಾ ಹಾಗೂ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದ ಡಬ್ಬಿಂಗ್ ಗುಣಮಟ್ಟದ ಬಗ್ಗೆ ಹೇಳಲೇಬೇಕು. ಬ್ರಹ್ಮ ಎಐ ತಂತ್ರಜ್ಞಾನ ಬಳಸಿ ಭಾಷೆಗೆ ತಕ್ಕಂತೆ ಕಲಾವಿದರ ಲಿಪ್ ಸಿಂಕ್ ಮಾಡಲಾಗಿದೆ. ಇದು ಯಶಸ್ವಿಯಾಗಿದ್ದು ಕನ್ನಡದಲ್ಲೇ ಸಿನಿಮಾ ನೋಡಿದ ಅನುಭವ ನೀಡುತ್ತದೆ. ಡಬ್ಬಿಂಗ್ ಕ್ಷೇತ್ರದಲ್ಲಿ ಇದು ಮುಂದೆ ಹೊಸ ಕ್ರಾಂತಿ ಮಾಡಲಿದೆ.
ಕೊನೆಯದಾಗಿ
ಒಟ್ಟಾರೆ ಸಿನಿಮಾ ನೋಡಿ ಮುಗಿಸಿದ ಮೇಲೆ ಇನ್ನು ಏನೋ ಬೇಕಿತ್ತು ಎನ್ನುವ ಭಾವನೆ ಮೂಡಿಸುವಂತಿದೆ. ವಿಮರ್ಶೆಗಾಗಿ ಸರಿ, ತಪ್ಪುಗಳ ವಿಶ್ಲೇಷಣೆ ಅಷ್ಟೆ. ಒಟ್ಟಾರೆ ಒಂದು ಸಿನಿಮಾ ಆಗಿ 'ರಾಮಾಯಣ' ನಿಜಕ್ಕೂ ವಿಷ್ಯುವಲ್ ಟ್ರೀಟ್. ತ್ರಿಡಿಯಲ್ಲಿ ಸಿನಿಮಾ ಮತ್ತಷ್ಟು ರೋಚಕವಾಗಿದೆ. ಮಿಸ್ ಮಾಡದೇ ನೋಡಿ. ಮುಖ್ಯವಾಗಿ ಮಕ್ಕಳಿಗೆ ಸಿನಿಮಾ ತೋರಿಸಿ. ಹೆಚ್ಚು ನಿರೀಕ್ಷೆ ಇಲ್ಲದೇ ಹೋಗಿ ನೀವು ಸಿನಿಮಾ ನೋಡಿ ಎಂಜಾಯ್ ಮಾಡಿ.
ರೇಟಿಂಗ್: 3.5/5