ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ರಣಬಾಲಿ' ಸಿನಿಮಾ ಬಿಡುಗಡೆಗೆ ನಾಲ್ಕು ದಿನ ಬಾಕಿಯಿದೆ. ರಜನಿಕಾಂತ್ ನಟನೆಯ 'ಜೈಲರ್- 2' ಎದುರು ದಸರಾ ಸಂಭ್ರಮದಲ್ಲಿ ಈ ಸಿನಿಮಾ ಬಿಡುಗಡೆ ಆಗ್ತಿದೆ. ಐತಿಹಾಸಿಕ ಕಥಾಹಂದರ ಚಿತ್ರದಲ್ಲಿದೆ. ಬ್ರಿಟೀಷರ ಕಾಲಘಟ್ಟದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಿದೆ. ಇದೆಲ್ಲದರ ನಡುವೆ ಟಿಕೆಟ್ ದರ ವಿಚಾರದಲ್ಲಿ ವಿಜಯ್ ದೇವರಕೊಂಡ ಹೇಳಿಕೆ ವೈರಲ್ ಆಗ್ತಿದೆ.
ದೊಡ್ಡ ದೊಡ್ಡ ಸಿನಿಮಾಗಳು ಬಂದಾಗ ಟಿಕೆಟ್ ದರ ಹೆಚ್ಚಿಸುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಬೇಗ ಸಿನಿಮಾ ನೋಡಬೇಕು ಎನ್ನುವ ಅಭಿಮಾನಿಗಳ ಉತ್ಸಾಹವನ್ನು ಬಂಡವಾಳ ಮಾಡಿಕೊಂಡು ಗಣನೀಯವಾಗಿ ಟಿಕೆಟ್ ದರ ಹೆಚ್ಚಿಸುವ ಪ್ರಯತ್ನ ನಡೆಯುತ್ತದೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಅದು ಮತ್ತಷ್ಟು ಹೆಚ್ಚಾಗಿದೆ. ಕರ್ನಾಟಕದಲ್ಲಿ ಯಾವುದೇ ನಿಯಂತ್ರಣ ಇಲ್ಲದೇ ದೊಡ್ಡ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಿಸುತ್ತಾರೆ.
ಆಂಧ್ರ, ತೆಲಂಗಾಣದಲ್ಲಿ ಟಿಕೆಟ್ ದರ ಹೆಚ್ಚಳ ಅಷ್ಟು ಸುಲಭ ಅಲ್ಲ. ಆದರೆ ದೊಡ್ಡ ಸಿನಿಮಾಗಳು ಬಂದಾಗ ನಿರ್ಮಾಪರು ಸರ್ಕಾರದ ಬಳಿ ಮನವಿ ಮಾಡಿ ಟಿಕೆಟ್ ದರ ಹೆಚ್ಚಿಸಲು ಅವಕಾಶ ಪಡೆಯುತ್ತಾರೆ. ಆದರೆ ನನ್ನ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚು ಮಾಡುವುದು ಬೇಡ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ಮುಂದೆ ನಾನು ನಟಿಸುವ ಯಾವುದೇ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕೆ ನಾನು ಒಪ್ಪಲ್ಲ. ಆದರೆ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ನಟಿಸಿದರೆ ಮಾತ್ರ ಟಿಕೆಟ್ ದರ ಹೆಚ್ಚಿಸಲು ಒಪ್ಪುತ್ತೇನೆ ಎಂದಿದ್ದಾರೆ.
ಟಿಕೆಟ್ ದರ ಹೆಚ್ಚಿಸುವುದನ್ನು ನಾನು ವೈಯಕ್ತಿಕವಾಗಿ ಒಪ್ಪುವುದಿಲ್ಲ. ಆದರೆ ಎಲ್ಲವೂ ನನ್ನ ಕೈಯಲ್ಲಿ ಇರುವುದಿಲ್ಲ. ನಿರ್ಮಾಪಕರು ಹೆಚ್ಚು ಬಂಡವಾಳ ಸುರಿಯುತ್ತಾರೆ. ಅದನ್ನು ಮರಳಿ ಪಡೆಯಲು ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗುತ್ತಾರೆ. ಆದರೂ ನನ್ನ ಮುಂದಿನ ಸಿನಿಮಾಗಳಲ್ಲಿ ಹೀಗೆ ಆಗಲು ಬಿಡುವುದಿಲ್ಲ ಎಂದು ವಿಜಯ್ ಹೇಳಿದ್ದಾರೆ.
ನಿಜಕ್ಕೂ ವಿಜಯ್ ನಿರ್ಧಾರವನ್ನು ಮೆಚ್ಚಲೇಬೇಕು. ಪ್ರೇಕ್ಷಕರು ಸಿನಿಮಾ ನೋಡಬೇಕು ಎನ್ನುವ ಉತ್ಸಾಹವನ್ನು ಎನ್‌ಕ್ಯಾಶ್ ಮಾಡಿಕೊಂಡು ಸುಲಿಗೆ ಮಾಡುವುದು ಕಮ್ಮಿ ಆಗಬೇಕು ಬೇರೆ ಸ್ಟಾರ್ ನಟರು ಕೂಡ ಇದನ್ನು ಅನುಸರಿಸಬೇಕು. ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ನಿಗದಿಗೆ ಯತ್ನಿಸಲಾಗಿತ್ತು. ಆದರೆ 'ಕಾಂತಾರ- 1' ಸಿನಿಮಾ ಬಿಡುಗಡೆ ಹೊತ್ತಲ್ಲಿ ಸ್ವತಃ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇದನ್ನು ವಿರೋಧಿಸಿತ್ತು. ಹಾಗಾಗಿ ಸರ್ಕಾರದ ಪ್ರಯತ್ನ ವಿಫಲವಾಗಿತ್ತು. ಬೆಂಗಳೂರಿನಲ್ಲಿ ತಮಿಳು ಚಿತ್ರಕ್ಕೆ 1000 ರೂ, 2000 ರೂ, ತೆತ್ತು ಜನ ಸಿನಿಮಾ ನೋಡುವಂತಾಗಿದೆ.