ರವಿತೇಜ ನಟನೆಯ 'ಇರುಮುಡಿ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. 'ಟಾಕ್ಸಿಕ್' ರೀತಿಯ ದೊಡ್ಡ ಸಿನಿಮಾ ಎದುರು ಈ ಸಿನಿಮಾ ಗೆಲುವಿನ ನಗೆ ಬೀರಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದು 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ.
ದೊಡ್ಡ ದೊಡ್ಡ ಸಿನಿಮಾ ದಾಖಲೆಗಳನ್ನು 'ಇರುಮುಡಿ' ಸಿನಿಮಾ ಹಿಂದಿಕ್ಕಿದೆ. ಫ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಅಪ್ಪಿ ಮೆರೆಸಿದ್ದಾರೆ. 18ನೇ ದಿನವೂ ಸಿನಿಮಾ ಕಲೆಕ್ಷನ್ ಜೋರಾಗಿದೆ. ಆಗಸ್ಟ್ 21ರಂದು ಈ ಆಕ್ಷನ್ ಡ್ರಾಮಾ ಸಿನಿಮಾ ತೆರೆಗೆ ಬಂದಿತ್ತು. ಕರ್ನಾಟಕದಲ್ಲೇ ಈವರೆಗೆ ಸಿನಿಮಾ 16 ಕೋಟಿ ರೂ. ಕೊಳ್ಳೆ ಹೊಡೆದಿದೆ.
ಕನ್ನಡಕ್ಕೆ ಡಬ್ ಆಗದೇ ತೆಲುಗಿನಲ್ಲೇ 'ಇರುಮುಡಿ' ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆಗಿತ್ತು. 'ಟಾಕ್ಸಿಕ್' ಚಿತ್ರಕ್ಕಾಗಿ ಒಂದಷ್ಟು ಸ್ಕ್ರೀನ್‌ಗಳನ್ನು ತೆಗೆಯಲಾಗಿತ್ತು. ಆದರೆ ಯಶ್ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡದೇ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಹಾಗಾಗಿ 'ಇರುಮುಡಿ' ಚಿತ್ರಕ್ಕೆ ವರವಾಯಿತು. ವಿತರಕರು ಭಾರೀ ಲಾಭ ಗಳಿಸಿದ್ದಾರೆ.
ಸ್ವಾಗತ್ ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ 'ಇರುಮುಡಿ' ಚಿತ್ರದ ಕರ್ನಾಟಕ ರೈಟ್ಸ್ ಕೊಂಡುಕೊಂಡಿತ್ತು. ಅಂದಾಜು 1 ಕೋಟಿ ರೂ.ಗೆ ರೈಟ್ಸ್ ವ್ಯವಹಾರ ಕುದುರಿಸಲಾಗಿತ್ತು. ಇದೀಗ 16 ಕೋಟಿ ರೂ. ಕಲೆಕ್ಷನ್ ಆಗಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಎಲ್ಲಾ ಕೂಡಿ ಕಳೆದರೂ ವಿತರಕರಿಗೆ ಭಾರೀ ಲಾಭವೇ ಆದಂತಾಗಿದೆ.
ಅಯ್ಯಪ್ಪ ಸ್ವಾಮಿ ಭಕ್ತರು, ತಂದೆ - ಮಗಳ ನಡುವಿನ ಬಾಂಧವ್ಯ, ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಸುತ್ತಾ 'ಇರುಮುಡಿ' ಸಿನಿಮಾ ಕಥೆ ಸುತ್ತುತ್ತದೆ. ರವಿತೇಜ ವೃತ್ತಿ ಜೀವನದಲ್ಲೇ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಇದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ತೆಲುಗಿನಲ್ಲಿ ಅತಿಹೆಚ್ಚು ಹಣ ಗಳಿಸಿದ ಸಿನಿಮಾ 'ಇರುಮುಡಿ' ಎನ್ನುವ ಚರ್ಚೆ ಶುರುವಾಗಿದೆ.