ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ವಿಶ್ವದಾದ್ಯಂತ 1500 ಕೋಟಿ ರೂ. ಕಲೆಕ್ಷನ್ ಮಾಡಿ ದರ್ಬಾರ್ ನಡೆಸ್ತಿದೆ. ಯೂರೋಪ್ ದೇಶಗಳಲ್ಲಿ ಕೂಡ ದಾಖಲೆ ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ಕರ್ನಾಟಕದಲ್ಲಿ ಭರ್ಜರಿ ಗಳಿಕೆ ಕಂಡು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಆದರೆ ಆಂಧ್ರ, ತೆಲಂಗಾಣದಲ್ಲಿ ಚಿತ್ರಕ್ಕೆ ಹಿನ್ನಡೆಯಾಗಿದೆ.
ಭಾರತೀಯ ಚಿತ್ರರಂಗದಲ್ಲಿ ಉತ್ತರ ಭಾರತ ಬಿಟ್ಟರೆ ಅತಿದೊಡ್ಡ ಸಿನಿಮಾ ಮಾರ್ಕೆಟ್ ಇದು. ತೆಲುಗು ರಾಜ್ಯಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ನೂರಾರು ಕೋಟಿ ಕೊಳ್ಳೆ ಹೊಡೆಯುತ್ತವೆ. ಕನ್ನಡದ 'ಕೆಜಿಎಫ್' ಹಾಗೂ 'ಕಾಂತಾರ' ಸರಣಿ ಸಿನಿಮಾಗಳು ಕೂಡ ಅಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿವೆ. ಆದರೆ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ- 1' ಮಾತ್ರ ಡಲ್ ಆಗಿದೆ. ಇದು ಅಚ್ಚರಿಗೆ ಕಾರಣವಾಗಿದೆ.
ಪೌರಾಣಿಕ, ಐತಿಹಾಸಿಕ ಸಿನಿಮಾಗಳು ಹೆಚ್ಚು ನಿರ್ಮಾಣ ಆಗಿದ್ದೇ ತೆಲುಗು ಚಿತ್ರರಂಗದಲ್ಲಿ. ರಾಮಾಯಣ ಹಾಗೂ ಮಹಾಭಾರತ ಆಧರಿಸಿ ಸಾಕಷ್ಟು ಸಿನಿಮಾಗಳು ತೆಲುಗಿನಲ್ಲಿ ಬಂದಿದ್ದವು. ಇಂತಹ ಚಿತ್ರಗಳಿಗೆ ಅಲ್ಲಿ ರಾಜಮರ್ಯಾದೆ ಸಿಗಬೇಕು. ಆದರೆ 'ರಾಮಾಯಣ- 1' ಸಿನಿಮಾ ವಿಚಾರದಲ್ಲಿ ಸುಳ್ಳಾಗಿದೆ. 'ಟಾಕ್ಸಿಕ್' ಚಿತ್ರವನ್ನು ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆ ಮಾಡಿದ್ದ ದಿಲ್ ರಾಜು ಇದೀ 'ರಾಮಾಯಣ' ಚಿತ್ರವನ್ನು ವಿತರಣೆ ಮಾಡಿದ್ದಾರೆ. ಇತ್ತೀಚೆಗೆ ಸಕ್ಸಸ್ ಮೀಟ್ ಮಾಡಿ ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡಿದ್ದರು.
ವಿತರಕರಿಗೆ ಹಾಕಿದ ಹಣ ವಾಪಸ್ ಬರಬೇಕು ಅಂದ್ರೆ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಬೇಕು ಎನ್ನಲಾಗ್ತಿದೆ. ಸದ್ಯ 14 ದಿನಕ್ಕೆ ಸಿನಿಮಾ 80 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಅಂದಾಜಿಸಲಾಗ್ತಿದೆ. ಆ ಲೆಕ್ಕದಲ್ಲಿ ಇನ್ನು 20 ಕೋಟಿ ರೂ. ಗಳಿಕೆ ಕಾಣಬೇಕು ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ತೆಲುಗು ಕಲಾವಿದರು ಯಾರು ನಟಿಸದೇ ಇರುವುದು, ಆಂಧ್ರ, ತೆಲಂಗಾಣದಲ್ಲಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿರುವುದು 'ರಾಮಾಯಣ' ಹಿನ್ನಡೆಗೆ ಕಾರಣ ಎಂದು ಹೇಳಲಾಗ್ತಿದೆ.
ಯಶ್ ಹಾಗೂ ಸಾಯಿ ಪಲ್ಲವಿ ನಟಿಸಿರುವುದರಿಂದ ಕರ್ನಾಟಕ, ತಮಿಳುನಾಡು ಹಾಗೂ ಕೇರಳಂನಲ್ಲಿ 'ರಾಮಾಯಣ' ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿದೆ. ತೆಲುಗು ಕಲಾವಿದರು ಯಾರು ಇಲ್ಲದೇ ಇರುವುದರಿಂದ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುತ್ತಿಲ್ಲ ಎಂದು ಕೆಲವರು ವಾದ ಮುಂದಿಡುತ್ತಿದ್ದಾರೆ. ಎರಡನೇ ಭಾಗದಲ್ಲಿ ಯಾವುದಾದರೂ ಮುಖ್ಯ ಪಾತ್ರಕ್ಕೆ ತೆಲುಗು ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ.