ನಟಿ ರಮ್ಯಾ ನಾಯಕಿಯಾಗಿ ಚಿತ್ರದಲ್ಲಿ ನಟಿಸಿ ಹತ್ತು ವರ್ಷ ಆಯ್ತು. ರಾಜಕೀಯದಲ್ಲಿ ಸಕ್ರಿಯರಾಗಿದ್ದ ರಮ್ಯಾ ಮತ್ತೆ ಸಿನಿಮಾಗಳಲ್ಲಿ ನಟಿಸೋ ಮನಸ್ಸು ಮಾಡಿದ್ದರು. ಆದರೆ ಯಾರಕೋ ಮತ್ತೆ ಹಿಂದೇಟು ಹಾಕಿದ್ದರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. "ಚಿತ್ರರಂಗಕ್ಕೆ ಮರಳುವುದಾದರೇ ತಿಳಿಸಿ, ಚಿತ್ರಕಥೆ ಸಿದ್ಧ" ಎಂದು ನಿರ್ದೇಶಕ ವಿಜಯಪ್ರಸಾದ್ ಹೇಳಿದ್ದಾರೆ.
ವಿಜಯಪ್ರಸಾದ್ ನಿರ್ದೇಶನದ 'ಸಿದ್ಲಿಂಗು' ಚಿತ್ರದಲ್ಲಿ ನಟಿಸಿ ರಮ್ಯಾ ಸಕ್ಸಸ್ ಕಂಡಿದ್ದರು. ಮಂಗಳಾ ಪಾತ್ರದಲ್ಲಿ ಗಮನ ಸೆಳೆದಿದ್ದರು. ಯೋಗಿ ಹಾಗೂ ರಮ್ಯಾ ಕಾಂಬೋ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ವಿಜಯಪ್ರಸಾದ್ ಬರವಣಿಗೆ ನಿರ್ದೇಶನಕ್ಕೂ ಒಳ್ಳೆ ಅಂಕ ಸಿಕ್ಕಿತ್ತು. ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಸ್ವಾತಿಮುತ್ತಿನ ಮಳೆಹನಿಯೇ' ಚಿತ್ರದಲ್ಲಿ ರಮ್ಯಾ ನಟಿಸೋಕೆ ಒಪ್ಪಿದ್ದರು. ಬಳಿಕ ಕಾರಣಾಂತರಗಳಿಂದ ಹಿಂದೆ ಸರಿದಿದ್ದರು. ನೆಚ್ಚಿನ ನಟಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ.
ನಿರ್ದೇಶಕ ವಿಜಯಪ್ರಸಾದ್ ಒಂದೊಳ್ಳೆ ಕಥೆ ಮಾಡಿ ರಮ್ಯಾ ಅವರಿಗೆ ಹೇಳಿದ್ದಾರೆ. ಆಕೆ ಕೂಡ ಒಪ್ಪಿ ಒಂದಷ್ಟು ಬದಲಾವಣೆ ಹೇಳಿದ್ದರು. ಅದೆಲ್ಲವನ್ನು ತಿದ್ದಿತೀಡಿ ನಿರ್ದೇಶಕರು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ಆದರೆ ರಮ್ಯಾ ಸಂಪರ್ಕಕ್ಕೆ ಸಿಕ್ತಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾ ಮುಖಾಂತರ ರಮ್ಯಾ ಅವರಿಗೆ ವಿಜಯಪ್ರಸಾದ್ ಸಂದೇಶ ಕಳುಹಿಸಿದ್ದಾರೆ. "ಇದು ನನ್ನ ಅಸಹಾಯಕತೆಯೂ ಅಲ್ಲ, ದೌರ್ಬಲ್ಯವೂ ಅಲ್ಲ, ಒಬ್ಬ ಬರಹಗಾರನ ಮತ್ತು ನಿರ್ದೇಶಕನ ಆತ್ಮವಿಶ್ವಾಸ..! ನೀವು ಕಾಗೆ ಹಾರಿಸುವಲ್ಲಿ ನಿಸ್ಸಿಮರು ಎಂದು ಜಗತ್ತು ಹೇಳಿದರೂ ನಾನು ಹಾರಾಡಲೂ ಸಿದ್ಧ.. ಕಾರಣ ಇಷ್ಟೇ, ನಿಮ್ಮ ತಂದೆಯವರೊಂದಿಗೆ ಇದ್ದ ನಮ್ಮ ನಿಮ್ಮ ಪರಿಶುದ್ಧ ಒಡನಾಟ.. ಚಿತ್ರರಂಗಕ್ಕೆ ನೀವು ಮರಳುವುದಾದರೇ ತಿಳಿಸಿ, ಸಂಪೂರ್ಣ ಚಿತ್ರಕಥೆ ನಿಮ್ಮ ಮುಂದೆ..! ದೋಣಿ ಸಾಗಲಿ ಮುಂದೆ ಹೋಗಲಿ" ಎಂದು ಬರೆದುಕೊಂಡಿದ್ದಾರೆ.
ಇದೇ ವಿಚಾರವಾಗಿ ಸಿನಿ ಸಮಾಚಾರ ವೆಬ್‌ಸೈಟ್‌ಗೆ ನಿರ್ದೇಶಕ ವಿಜಯಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. 'ಸಿದ್ಲಿಂಗು- 2' ಬಳಿ ರಮ್ಯಾ ಅವರ ಜೊತೆ ಸಿನಿಮಾ ಮಾಡಲು ಸಿದ್ಧತೆ ನಡೀತಿದೆ. ಸ್ಕ್ರಿಪ್ಟ್ ಫೈನಲ್ ಆಗಿದೆ. ಈಗಾಗಲೇ ಅವರಿಗೆ ಕಥೆ ಹೇಳಿದ್ದೀನಿ. ಇತ್ತೀಚೆಗೆ ಸಂಪರ್ಕ ಮಾಡಲು ಸಾಧ್ಯವಾಗ್ತಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದೀನಿ. ಅವ್ರು ಒಪ್ಪಿ ಸಿನ್ಮಾ ಮಾಡಿದ್ರೆ ಚೆನ್ನಾಗಿರುತ್ತೆ. ಇಲ್ಲದಿದ್ದರೆ ಬೇರೆಯವರನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಬಹುದು. ಆದ್ರೆ ಅವ್ರ ರೀ-ಎಂಟ್ರಿಗೆ ಇದು ಒಳ್ಳೆ ಸಬ್ಜೆಕ್ಟ್" ಎಂದಿದ್ದಾರೆ.
ನಾನು ಇಷ್ಟು ದಿನ ಮಾಡಿದ್ದ ಸಿನಿಮಾಗಳಿಗಿಂತ ಇದು ಬಹಳ ವಿಭಿನ್ನವಾದ ಸಿನಿಮಾ. ರಮ್ಯಾ ಅವರಿಗಾಗಿಯೇ ಕಥೆ ಮಾಡಿದ್ದೀನಿ. ಇದರ ಜೊತೆಗೆ ಮತ್ತೊಂದು ಕಥೆ ಕೂಡ ಸಿದ್ಧವಿದೆ. ಅದು ಬೇರೆ ಕಲಾವಿದರಿಗೆ ಮಾಡಿರುವ ಸ್ಕ್ರಿಪ್ಟ್ ಎಂದು ವಿಜಯಪ್ರಸಾದ್ ಮಾಹಿತಿ ನೀಡಿದ್ದಾರೆ.