ಸ್ಯಾಂಡಲ್‌ವುಡ್ ಕ್ವೀನ್ ಬೆಳ್ಳಿಪರದೆ ಮೇಲೆ ಬಂದು ಬಹಳ ವರ್ಷಗಳಾಯ್ತು. 'ನಾಗರಹಾವು' ಬಳಿಕ ಆಕೆ ನಟಿಸಿದ ಸಿನಿಮಾ ಯಾವುದೇ ಸಿನಿಮಾ ತೆರೆಗೆ ಬರಲಿಲ್ಲ. ನಡುವೆ 'ಸ್ವಾತಿಮುತ್ತಿನ ಮಳೆ ಹನಿಯೆ' ಚಿತ್ರದಲ್ಲಿ ನಟಿಸುವುದಾಗಿ ಹೇಳಿ ಹಿಂದಿ ಸರಿದಿದ್ದರು. ಇದೀಗ ಮತ್ತೆ ಬಣ್ಣಹಚ್ಚುವ ಬಗ್ಗೆ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾಗಲೇ ರಮ್ಯಾ ರಾಜಕೀಯದತ್ತ ಮುಖ ಮಾಡಿದ್ದರು. ಮಂಡ್ಯ ಉಪಚುನಾವಣೆಯಲ್ಲಿ ಗೆದ್ದು ಸಂಸದೆ ಆಗಿದ್ದರು. ಹಾಗಾಗಿ ಸಿನಿಮಾ ಬಿಟ್ಟು ಸಕ್ರಿಯ ರಾಜಕೀಯರಂಗದಲ್ಲಿ ಬ್ಯುಸಿಯಾಗಿಬಿಟ್ಟಿದ್ದರು. 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. ಬಳಿಕ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ದೆಹಲಿ ಸೇರಿದ್ದರು. ಹಾಗಾಗಿ ಸಿನಿಮಾಗಳಿಂದ ದೂರ ಆಗಿಬಿಟ್ಟರು. ಇದೀಗ ಹೇಮಂತ್ ರಾವ್ ನಿರ್ದೇಶನ ಮಾಡಿದ್ರೆ ನಾನು ನಟಿಸೋಕೆ ಸಿದ್ಧ ಎಂದಿದ್ದಾರೆ.

ಮುಂದೆ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ನೋಡೋಣ, ಗೊತ್ತಿಲ್ಲ. ಇನ್ನು ಅದಕ್ಕೆ ಬಹಳ ಸಮಯ ಇದೆ ಅಲ್ವಾ ಎಂದು ರಮ್ಯಾ ಹೇಳಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸೋದು ಯಾವಾಗ ಎನ್ನುವ ಪ್ರಶ್ನೆಗೂ ಉತ್ತರಿಸಿದ್ದಾರೆ. "ಹೇಮಂತ್ ರಾವ್ ಸಿನಿಮಾ ಮಾಡಿದ್ರೆ ನಾನು ನಟಿಸೋಕೆ ಸಿದ್ಧ.. ಅವ್ರು ಒಂದು ಸ್ಕ್ರಿಪ್ಟ್ ಹೇಳಿದ್ದಾರೆ. ಒಂದು ವರ್ಷ ಆಯ್ತು..ಅವ್ರು ಆಕ್ಷನ್ ಕಟ್ ಹೇಳಿದ್ರೆ ಕಂಡಿತ ನಟಿಸ್ತೀನಿ" ಎಂದು ಟಿವಿ9 ವಾಹಿನಿ ಸಂದರ್ಶನದಲ್ಲಿ ರಮ್ಯಾ ತಿಳಿಸಿದ್ದಾರೆ.

ನಟಿ ರಮ್ಯಾ ಅವರನ್ನು ಮತ್ತೆ ತೆರೆಮೇಲೆ ಕರೆತರಲು ಸಾಕಷ್ಟು ನಿರ್ದೇಶಕರು ಪ್ರಯತ್ನಿಸುತ್ತಿದ್ದಾರೆ. 'ಸಿದ್ಲಿಂಗು' ಬಳಿಕ ವಿಜಯ್ ಪ್ರಸಾದ್ ಕೂಡ ಆಕೆ ಜೊತೆ ಸಿನಿಮಾ ಮಾಡಲು ಕಥೆ ಹೇಳಿದ್ದಾರೆ. ಆದರೆ ಯಾವುದನ್ನು ರಮ್ಯಾ ಫೈನಲ್ ಮಾಡಿಲ್ಲ. 'ಸಪ್ತಸಾಗರದಾಚೆ ಎಲ್ಲೊ' ಸರಣಿ ಬಳಿಕ ಹೇಮಂತ್ ರಾವ್ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಣ್ಣ ಹಾಗೂ ಧನಂಜಯ್ ನಟನೆಯ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರವನ್ನು ತೆರೆಗೆ ತರ್ತಿದ್ದಾರೆ. ಆ ಬಳಿಕ ರಮ್ಯಾ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ನಿರೀಕ್ಷೆಯಿದೆ.

ರಮ್ಯಾ ನಾಯಕಿಯಾಗಿ ನಟಿಸಿದ ಸಿನಿಮಾ ತೆರೆಕಂಡು 10 ವರ್ಷ ಆಯ್ತು. ಮೂರು ವರ್ಷಗಳ ಹಿಂದೆ ಬಂದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಅತಿಥಿ ಪಾತ್ರದಲ್ಲಿ ರಮ್ಯಾ ಮಿಂಚಿದ್ದರು. ಆದರೆ ಬಳಿಕ ತಮ್ಮ ದೃಶ್ಯ ಬಳಸದಂತೆ ತಾಕೀತು ಮಾಡಿದ್ದರು. ಮುಂದೆ ಅದು ಭಾರೀ ವಿವಾದಕ್ಕೆ ಕಾರಣವಾಗಿ ಆಕೆ ಕೋರ್ಟ್ ಮೆಟ್ಟಿಲೇರಿದ್ದರು. ಇನ್ನು ಬಹಳ ಹಿಂದೆ ನಿಂತಹೋಗಿದ್ದ ರಮ್ಯಾ ನಟನೆಯ 'ರಕ್ತಕಾಶ್ಮೀರ' ಸಿನಿಮಾ ಈ ವರ್ಷ ತೆರೆಗೆ ಬಂದಿತ್ತು. ಉಪೇಂದ್ರ ಜೊತೆ ಈ ಚಿತ್ರದಲ್ಲಿ ಅವರು ನಟಿಸಿದ್ದರು.