ಶಿವಮೊಗ್ಗದ ಜಂಬೂಸವಾರಿ ವೇಳೆ ಆನೆ ದಿಕ್ಕಾಪಾಲಾಗಿ ಓಡಿ ಆತಂಕ ನಿರ್ಮಾಣವಾಗಿದ್ದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸರಿಯಾದ ತರಬೇತಿ ಇಲ್ಲದೇ ಆನೆಯನ್ನು ಹೀಗೆ ಬಳಸಿಕೊಂಡಿದ್ದು ತಪ್ಪು. ದೊಡ್ಡದಾಗಿ ಯಾವುದೇ ಅನಾಹುತ ಆಗಲಿಲ್ಲ. ಒಂದು ವೇಳೆ ಏನಾದರೂ ಆಗಿದ್ರೆ ಪಾಪ ಆನೆಯನ್ನೇ ದೂರುತ್ತಿದ್ದರು ಎಂದು ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ. ಈ ಸಂಬಂಧ ಗಮನ ಹರಿಸುವಂತೆ ಸಚಿವ ರಾಮಲಿಂಗಾ ರೆಡ್ಡಿ ಅವರಲ್ಲಿ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ದಸರಾ ಜಂಬೂ ಸವಾರಿ ರೀತಿ ರಾಜ್ಯದ ಕೆಲವೆಡೆ ಅಂಬಾರಿಯಲ್ಲಿ ದೇವರ ಮೆರವಣಿಗೆ ಮಾಡುವ ಆಚರಣೆಯಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಬೆಳ್ಳಿ ಅಂಬಾರಿಯನ್ನು ಆನೆಯ ಮೇಲೆ ಹೊರಿಸಲಾಗುತ್ತಿದೆ. ನಿನ್ನೆ(ಅಕ್ಟೋಬರ್ 22) ವಿಜಯದಶಮಿ ಹಿನ್ನೆಲೆಯಲ್ಲಿ ಸೋಮಣ್ಣ ಎಂಬ ಆನೆಯ ಮೇಲೆ ಬೆಳ್ಳಿ ಅಂಬಾರಿಯನ್ನು ಕಟ್ಟಿ ಮೆರವಣಿಗೆ ಮಾಡಲಾಯಿತು. ಈ ವೇಳೆ ದಿಕ್ಕಾಪಾಲಾಗಿ ಓಡಿ ಕೆಲವೊತ್ತು ಆತಂಕ ಮನೆ ಮಾಡಿತ್ತು.
ಅಂಬಾರಿ ಸಮೇತ ಆನೆ ಮನಸೋಇಚ್ಛೆ ಓಡಲು ಆರಂಭಿಸಿತ್ತು. ಜನ ದಿಕ್ಕಾಪಾಲಾಗಿ ಓಡಿದರು. ಸುಮಾರು ಮುಕ್ಕಾಲು ಗಂಟೆ ಕಾಲ ಹೀಗೆ ಆನೆ ಓಡುತ್ತಲೇ ಇತ್ತು. ಒಂದು ಗೋಡೌನ್ ಹಾಗೂ ಒಂದು ಕಾರು ಜಖಂ ಆಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಆದರೆ ಆನೆ ಓಡುತ್ತಿರುವಾಗಲೇ ಅಂಬಾರಿ ಬಲಕ್ಕೆ ಜಾರಿತು. ಅಂಬಾರಿ ಸಮೇತ ಕಾರನ್ನು ಎತ್ತಿ ಬಿಸಾಕಿತ್ತು. ಕೊನೆಗೆ ಪಶು ವೈದ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸಮಾಧಾನಪಡಿಸಿದರು. ಅಂಬಾರಿಯ ಮಂಟಪ ಸಂಪೂರ್ಣ ಹಾನಿಯಾಗಿದ್ದು ಮಂಟಪದಲ್ಲಿ ಇದ್ದ ದೇವಿಯ ಮೂರ್ತಿ ಕೂಡ ಕೊಂಚ ಹಾನಿಯಾಗಿದೆ.
ನಟಿ, ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿ "ಇದು ಸೋಮಣ್ಣ ಆನೆ. ಶಿವಮೊಗ್ಗದಲ್ಲಿ ನಡೆದ ಮೆರವಣಿಗೆಗಾಗಿ ಕೆಲವು ದಿನಗಳ ಹಿಂದೆ ಶಿಬಿರವೊಂದರಿಂದ ಕರೆತರಲಾತ್ತು. ಜನರಿಂದ ತುಂಬಿದ್ದ ಕಿರಿದಾದ ಬೀದಿಗಳಲ್ಲಿ ಇದನ್ನು ನಡೆಸಿಕೊಂಡು ಹೋಗಲಾಯಿತು. ಭಯ ಮತ್ತು ಆತಂಕಕ್ಕೆ ಒಳಗಾದ ಆನೆಯು ನಿಯಂತ್ರಣ ತಪ್ಪಿ ಓಡಲಾರಂಭಿಸಿತು. ಅದೃಷ್ಟವಶಾತ್ ಯಾರಿಗೂ ಗಾಯವಾಗಲಿಲ್ಲ; ಇಲ್ಲದಿದ್ದರೆ, ಈ ಆನೆಯನ್ನೇ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಸೋಮಣ್ಣ ಕುಂಟುತ್ತಿರುವುದನ್ನು ನೀವು ಸ್ಪಷ್ಟವಾಗಿ ಕಾಣಬಹುದು. ಅದು ನೋವಿನಲ್ಲಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಅದನ್ನು ಕರೆದೊಯ್ಯಲು ಒಂದು ಟ್ರಕ್ ವ್ಯವಸ್ಥೆ ಮಾಡಲು ಸಾಧ್ಯವಿರಲಿಲ್ಲವೇ?" ಎಂದು ರಮ್ಯಾ ಪ್ರಶ್ನಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಸರ್, "ಪ್ರಾಣಿಗಳ ಮೇಲೆ ನಿಮಗೆ ಎಷ್ಟೊಂದು ಪ್ರೀತಿ ಇದೆ ಎಂಬುದು ನನಗೆ ತಿಳಿದಿದೆ. ದಯವಿಟ್ಟು ಈ ವಿಷಯವನ್ನು ತುರ್ತಾಗಿ ಗಮನಿಸಿ, ಏಕೆಂದರೆ ಸೋಮಣ್ಣನಿಗೆ ಈಗ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಇಂತಹ ಮೆರವಣಿಗೆಗಳಿಗೆ ಶಿಬಿರದ ಆನೆಗಳನ್ನು ಇನ್ನು ಮುಂದೆ ಬಳಸಲು ಅನುಮತಿಸಬಾರದೆಂದು ನಾನು ವಿನಂತಿಸುತ್ತೇನೆ" ಎಂದು ರಮ್ಯಾ ಬರೆದುಕೊಂಡಿದ್ದಾರೆ.
This is Somanna, an elephant brought from a camp a few days ago for a procession in Shivamogga. He was led through narrow streets packed with people. Frightened and anxious, he ran amok. Thankfully no one was hurt, or he would have been the one punished.
— Ramya/Divya Spandana (@divyaspandana) October 21, 2026
You can clearly see… pic.twitter.com/kNDdNdgPNS